ಥೈರಾಯ್ಡ್ ಸಮಸ್ಯೆಯಿದ್ದರೆ ಜೀವನ ಪರ್ಯಂತ ಮಾತ್ರೆ ತೆಗೆದುಕೊಳ್ಳಬೇಕೇ? ಸಾಮಾನ್ಯವಾಗಿ ಈ ಪ್ರಶ್ನೆ ಎಲ್ಲರಲ್ಲಿರುತ್ತದೆ. ಇಂತಹವರಿಗೆ ಈ ಹಿಂದೆ ಖ್ಯಾತ ಸ್ತ್ರೀ ರೋಗ ತಜ್ಞೆ ಡಾ ಪದ್ಮಿನಿ ಪ್ರಸಾದ್ ಯೂ ಟ್ಯೂಬ್ ವಾಹಿನಿಯೊಂದರ ಸಂವಾದವೊಂದರಲ್ಲಿ ಒಮ್ಮೆ ಹೀಗೆ ಹೇಳಿದ್ದರು.
ಥೈರಾಯ್ಡ್ ಎನ್ನುವುದು ಒಂದು ಗ್ರಂಥಿ. ಇದು ಥೈರಾಕ್ಸಿ ಎನ್ನುವ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಈ ಹಾರ್ಮೋನ್ ಪ್ರತೀ ಜೀವಕೋಶಗಳ, ಪ್ರತೀ ಅಂಗಾಂಗಳ ಕಾರ್ಯನಿರ್ವಹಣೆಗೆ ಪ್ರಮುಖವಾದ ಹಾರ್ಮೋನ್. ಇದು ಸರಿಯಾಗಿದ್ದರೆ ಯಾವುದೇ ತೊಂದರೆಯಾಗದು.
ಕೆಲವೊಂದು ಸಂದರ್ಭದಲ್ಲಿ ಈ ಗ್ರಂಥಿಯಲ್ಲಿ ಹೆಚ್ಚು ಹಾರ್ಮೋನ್ ಉತ್ಪತ್ತಿಯಾಗಬಹದು ಅಥವಾ ಕಡಿಮೆ ಉತ್ಪತ್ತಿಯಾಗಬಹುದು. ಕಡಿಮೆ ಉತ್ಪತ್ತಿಯಾಗುವವರಲ್ಲಿ ಕಡಿಮೆ ಶಕ್ತಿ ಇರುವಂತೆ, ಚಟವಟಿಕೆಗಳಲ್ಲಿ ನಿರಾಸಕ್ರಿ, ಸುಸ್ತಾಗುವುದು, ಮಲಬದ್ಧತೆ, ಮುಟ್ಟಿನ ತೊಂದರೆಗಳು ಕಂಡುಬರಬಹುದು. ಎಷ್ಟೋ ಜನರಲ್ಲಿ ಬಂಜೆತನಕ್ಕೂ ಕಾರಣವಾಗುತ್ತದೆ. ಹೀಗಾಗಿ ಥೈರಾಯ್ಡ್ ಹಾರ್ಮೋನ್ ಪ್ರಮಾಣ ಕಡಿಮೆಯಾದಾಗ ಸಮಸ್ಯೆಯಾಗುತ್ತದೆ.
ಒಂದು ಸಲ ಇದನ್ನು ಪತ್ತೆ ಮಾಡಿದರೆ ಹಾರ್ಮೋನ್ ಎಷ್ಟು ಕಡಿಮೆ ಉತ್ಪತ್ತಿಯಾಗುತ್ತದೋ ಅದನ್ನು ಸರಿದೂಗಿಸಲು ಹೊರಗಿನಿಂದ ಮಾತ್ರೆ ಮೂಲಕ ಕೊಡಬೇಕಾಗುತ್ತದೆ. ದಿನನಿತ್ಯ ತೆಗೆದುಕೊಂಡರೆ ಅದರಿಂದ ತೊಂದರೆಯೇನಿಲ್ಲ. ಅದನ್ನು ಎಷ್ಟು ತೆಗೆದುಕೊಳ್ಳಬೇಕು ಎಂದು ನಿಮ್ಮ ವೈದ್ಯರು ನಿರ್ಧರಿಸುತ್ತಾರೆ. ನಂತರ ಮೂರು-ಆರು ತಿಂಗಳಿಗೊಮ್ಮೆ ಪರೀಕ್ಷೆ ನಡೆಸಬೇಕು. ಹೀಗಾಗಿ ಹಾರ್ಮೋನ್ ತೆಗೆದುಕೊಳ್ಳಬೇಕು ಎಂದು ಆತಂಕಪಡಬೇಕಾಗಿಲ್ಲ ಎಂದು ಅವರು ಸಂವಾದದಲ್ಲಿ ಹೇಳಿದ್ದರು.
ನೆನಪಿರಲಿ: ಈ ಸಲಹೆಯನ್ನು ಸ್ವೀಕರಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮುಂದುವರಿಯಬೇಕಾಗುತ್ತದೆ.