ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಆದರೆ ಬೆಳ್ಳುಳ್ಳಿಯನ್ನು ಯಾವ ರೀತಿ ಸೇವನೆ ಮಾಡಿದರೆ ಪ್ರಯೋಜನಕಾರೀ ಎಂದು ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಸಂವಾದವರೊಂದರಲ್ಲಿ ಹೀಗೆ ಹೇಳಿದ್ದರು.
ಬೆಳ್ಳುಳ್ಳಿಯಲ್ಲಿ ನಾನಾ ರೀತಿಯ ಪ್ರಯೋಜನಗಳಿವೆ. ಆರೋಗ್ಯದ ದೃಷ್ಟಿಯಿಂದ ಉತ್ತಮ. ಬೆಳ್ಳುಳ್ಳಿ ಖಾಯಿಲೆ ಗುಣಮಾಡಲು ಮಾತ್ರವಲ್ಲ, ಬಾರದಂತೆ ತಡೆಗಟ್ಟಲೂ ಉತ್ತಮ. ಕೆಲವು ಮಡಿವಂತರು ಬೆಳ್ಳುಳ್ಳಿ ತೆಗೆದುಕೊಳ್ಳುವುದಿಲ್ಲ.
ಆದರೆ ಬೆಳ್ಳುಳ್ಳಿಯ ವಿಚಾರವನ್ನು ನಮಗಿಂತ ಪಾಶ್ಚಾತ್ಯರು ಪ್ರಯೋಗ ಮಾಡಿ ಕಂಡುಕೊಂಡಿದ್ದಾರೆ. ಬೆಳ್ಳುಳ್ಳಿಯಲ್ಲಿ ಆಲನೀನ್ ಎನ್ನುವ ಔಷಧ ಗುಣವಿದೆ. ಬೆಳ್ಳುಳ್ಳಿಯನ್ನು ಹಾಗೇ ನುಂಗಿದರೆ, ಬೇಯಿಸಿದರೆ, ಕುದಿಸಿದರೆ ಪ್ರಯೋಜನವಿಲ್ಲ.
ಬೆಳ್ಳುಳ್ಳಿಯ ಪ್ರಯೋಜನವನ್ನು ನಿಜವಾಗಿ ಪಡೆಯಬೇಕೆಂದರೆ ಅದನ್ನು ಚೆನ್ನಾಗಿ ಜಗಿದು ತಿನ್ನಬೇಕು. ಅಗಿಯುವಾಗ ಜೊಲ್ಲು ರಸದೊಂದಿಗೆ ಸೇರಿಕೊಂಡು ಆಲನೀನ್ ಎನ್ನುವುದು ಆಲಸೀಸ್ ಆಗಿ ಬದಲಾಯಿಸುತ್ತದೆ. ಇದು ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಕ್ರಿಮಿಗಳನ್ನು ಕೊಂದು ಹಾಕುತ್ತದೆ. ಬಾಯಿಯಲ್ಲಿ ಬೇಕಾದಷ್ಟು ನಮ್ಮ ಆರೋಗ್ಯಕ್ಕೆ ಬೇಕಾದ ಕ್ರಿಮಿಗಳಿವೆ. ಅವುಗಳನ್ನು ಉಳಿಸಿ ಬೇಡದ ಕ್ರಿಮಿಗಳನ್ನು ಬೆಳ್ಳುಳ್ಳಿ ಸಾಯಿಸುತ್ತದೆ. ಹೀಗಾಗಿ ಬೆಳ್ಳುಳ್ಳಿ ಪ್ರತಿನಿತ್ಯ ಸೇವನೆ ಮಾಡಿದರೆ ಜ್ವರ, ಶೀತ, ಶ್ವಾಸಕೋಶ ಸೋಂಕು ಇತ್ಯಾದಿ ರೋಗಗಳು ಬರುವುದಿಲ್ಲ ಎಂದು ಅವರು ಹೇಳಿದ್ದರು.