ಕೆಲವೊಮ್ಮೆ ಅತಿಯಾದ ಕೆಲಸದಿಂದ ಅಥವಾ ಮಾನಸಿಕ ಒತ್ತಡಗಳಿಂದ ತುಂಬಾ ಸುಸ್ತಾಗಿ ಬಿಡುತ್ತೇವೆ. ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸು, ದೇಹ ಉಲ್ಲಾಸ ಪಡೆಯಲು ಏನು ಮಾಡಬೇಕು ಎಂದು ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಸಂವಾದ ಕಾರ್ಯಕ್ರಮವೊಂದರಲ್ಲಿ ಹೀಗೆ ಹೇಳಿದ್ದರು.
ಸಾಮಾನ್ಯವಾಗಿ ನಮಗೆ ಸುಸ್ತಾದಾಗ ಕೈ, ಕಾಲು ಚಾಚಿ ಆರಾಮವಾಗಿ ಮಲಗಿಕೊಂಡು ಬಿಡುತ್ತೇವೆ. ಅಥವಾ ಕೂತುಕೊಂಡು ಬಿಡುತ್ತೇವೆ. ಎಲ್ಲರೂ ಸಾಮಾನ್ಯವಾಗಿ ನೀಡುವ ಸಲಹೆಯೇ ಅದು.
ಆದರೆ ಡಾ ಬಿಎಂ ಹೆಗ್ಡೆ ಪ್ರಕಾರ ನಮಗೆ ಅತಿಯಾಗಿ ಸುಸ್ತಾದಾಗ ನಾವು ಸುಮ್ಮನೇ ಕೂರುವ ಬದಲು ಒಂದು ವಾಕಿಂಗ್ ಮಾಡಬೇಕು. ಸುಸ್ತಾದಾಗ ವಾಕಿಂಗ್ ಮಾಡೋದಾ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ನೀವು ಮತ್ತೆ ಎನರ್ಜಿ ವಾಪಸ್ ಪಡೆಯಬೇಕಾದರೆ ವಾಕಿಂಗ್ ಮಾಡಬೇಕು ಎನ್ನುತ್ತಾರೆ ಅವರು.
ಸುಸ್ತಾದಾಗ ಒಂದು ಸ್ವಲ್ಪ ಹೊತ್ತು ವಾಕಿಂಗ್ ಮಾಡಿ. ಅದು ಯಾವುದೇ ಸಮಯವಾಗಿರಲಿ. ಕೆಲವು ಹೊತ್ತು ವಾಕಿಂಗ್ ಮಾಡುವುದರಿಂದ ಎನರ್ಜಿ ಪಡೆಯುತ್ತೀರಿ. ಕೆಲವರಿಗೆ ಸೂರ್ಯನ ಬಿಸಿಲಿಗೆ ನಡೆದರೆ ಚರ್ಮದ ಕ್ಯಾನ್ಸರ್ ಬರುತ್ತೇನೋ ಎಂಬ ಭಯವಿರುತ್ತದೆ. ಅದೆಲ್ಲಾ ತಪ್ಪು ಕಲ್ಪನೆ. ನಿಜವಾಗಿ ಸೂರ್ಯನೇ ನಮಗೆ ಶಕ್ತಿದಾತ. ಆತನ ಕಿರಣಗಳು ಮೈ ಮೇಲೆ ಬಿದ್ದರೆ ಏನೂ ಸಮಸ್ಯೆಯಾಗಲ್ಲ. ಒಂದು ವಾರ ಸೂರ್ಯ ರಜೆ ಹಾಕಿ ಬಿಟ್ಟರೆ ಏನಾಗಬಹುದು ಹೇಳಿ? ನಾವು ಮನುಷ್ಯರು ಮಾತ್ರವಲ್ಲ, ಮರ-ಗಿಡಗಳೂ ಸಾಯುತ್ತವೆ. ಹೀಗಾಗಿ ಕೆಲವು ಹೊತ್ತು ವಾಕಿಂಗ್ ಮಾಡುವುದು ಉತ್ತಮ ಅಭ್ಯಾಸ ಎನ್ನುತ್ತಾರೆ ಅವರು.