ಆಧುನಿಕ ಜಗತ್ತಿನಲ್ಲಿ ಎಲ್ಲಾ ರಂಗದಲ್ಲೂ ಕಂಪ್ಯೂಟರ್ ಬಳಕೆಯಾಗುತ್ತಿದೆ. ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವವರು ಡಾ ಭುಜಂಗ ಶೆಟ್ಟಿಯವರು ಈ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ್ದ ಈ ಸಲಹೆಯನ್ನು ತಪ್ಪದೇ ಗಮನಿಸಿ.
ಮಕ್ಕಳು, ನೌಕರ ವರ್ಗ ಸೇರಿದಂತೆ ಬಹುತೇಕರು ಇತ್ತೀಚೆಗೆ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆ ಮಾಡುವ ಅವಧಿ ಹೆಚ್ಚಾಗಿದೆ. ನೌಕರರಂತೂ ದಿನಕ್ಕೆ 8-10 ಗಂಟೆ ಕಂಪ್ಯೂಟರ್ ಮುಂದೆ ಕುಳಿತು ಅನಿವಾರ್ಯವಾಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಇಂತಹವರಲ್ಲಿ ಡ್ರೈ ಐ ಸಮಸ್ಯೆ ಕಂಡುಬರುತ್ತಿದೆ.
ಡ್ರೈ ಐ ಸಮಸ್ಯೆಯೆಂದರೆ ಕಣ್ಣುರಿಯಾಗುವುದು, ಕಣ್ಣು ನೋವಾಗುವುದು, ಕೆಂಪಗಾಗುವುದು, ತಲೆನೋವು ಇತ್ಯಾದಿ ಲಕ್ಷಣಗಳು ಕಂಡುಬರಬಹುದು. ಹೆಚ್ಚು ಹೊತ್ತು ಕಂಪ್ಯೂಟರ್ ನ ಬೆಳಕಿಗೆ ಕಣ್ಣು ಒಡ್ಡಿದಾಗ ಕಣ್ಣಿನಲ್ಲಿ ಕಣ್ಣೀರಿನ ಪ್ರಮಾಣ ಕಡಿಮೆಯಾಗುವುದು, ಬತ್ತಿ ಹೋಗುವುದು ಸಹಜ.
ಇಂತಹವರು 20-20-20 ಸೂತ್ರವನ್ನು ಅಳವಡಿಸಬೇಕು. ಅಂದರೆ 20 ನಿಮಿಷಕ್ಕೊಮ್ಮೆ, 20 ಸೆಕೆಂಡುಗಳ ಕಾಲ 20 ಮೀಟರ್ ದೂರದ ವಸ್ತುವನ್ನು ನೋಡಬೇಕು. ಈ ರೀತಿ ಬ್ರೇಕ್ ಕೊಡುತ್ತಿದ್ದರೆ ನಿಮ್ಮ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ. ಒಂದು ವೇಳೆ ಕಣ್ಣುರಿ, ನೋವು, ತಲೆನೋವು ಹೆಚ್ಚಾಗುತ್ತಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅನಿವಾರ್ಯ ಎಂದು ಭುಜಂಗ ಶೆಟ್ಟಿ ಹೇಳಿದ್ದರು.