ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 9 ನೇ ವಿಕೆಟ್ ಗೆ ಅತ್ಯುತ್ತಮ ಜೊತೆಯಾಟವಾಡಿದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಗೆ ವಿರಾಟ್ ಕೊಹ್ಲಿ ಮನಸೋತರು.
ಶಮಿ ಮತ್ತು ಬುಮ್ರಾ ಒಂದೇ ಓವರ್ ನಲ್ಲಿ ಅದ್ಭುತ ಕವರ್ ಡ್ರೈವ್ ಹೊಡೆದು ರಂಜಿಸಿದಾಗ ಬಾಲ್ಕನಿಯಲ್ಲಿ ಕೂತಿದ್ದ ವಿರಾಟ್ ಕೊಹ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿ ತಮ್ಮ ಖುಷಿ ವ್ಯಕ್ತಪಡಿಸಿದ ಘಟನೆ ನಡೆಯಿತು.
ಈ ಬಾಲಂಗೋಚಿಗಳ ಬ್ಯಾಟಿಂಗ್ ನಿಂದಾಗಿಯೇ ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ ಗೌರವಯುತ ಮೊತ್ತ ದಾಖಲಿಸಲು ಸಾಧ್ಯವಾಯಿತು. ಹೆಚ್ಚು ಬ್ಯಾಟಿಂಗ್ ಅನುಭವ ಇಲ್ಲದೇ ಹೋದರೂ ಇಬ್ಬರೂ ಇಂಗ್ಲೆಂಡ್ ವೇಗಿಗಳನ್ನು ಎದುರಿಸಿದ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.