ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದ ಮೇಲೆ ಜೊತೆಗೇ ಐಸ್ ಕ್ರೀಂ ಸವಿಯೋಣ ಎಂದು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ನೀಡಿದ್ದ ಮಾತನ್ನು ಪ್ರಧಾನಿ ಮೋದಿ ನಿನ್ನೆ ಪೂರೈಸಿದರು.
ತಮ್ಮ ನಿವಾಸದಲ್ಲಿ ಒಲಿಂಪಿಕ್ ಪದಕ ವೀರರೊಂದಿಗೆ ವಿಶೇಷ ಔತಣಕೂಟ ಸವಿದ ಪ್ರಧಾನಿ ಮೋದಿ ಎಲ್ಲಾ ಕ್ರೀಡಾಳುಗಳನ್ನು ಮಾತನಾಡಿಸಿ ಅಭಿನಂದಿಸಿದರು. ಈ ವೇಳೆ ಪಿ.ವಿ. ಸಿಂಧುಗೆ ಸ್ಪೆಷಲ್ ಐಸ್ ಕ್ರೀಂ ತರಿಸಿ ಕೊಟ್ಟ ಮಾತು ಪೂರೈಸಿದರು.
ಇನ್ನು, ತಮ್ಮ ಜೊತೆಗೆ ಐಸ್ ಕ್ರೀಂ ಸವಿದ ಪ್ರಧಾನಿ ಮೋದಿಗೆ ಪಿ.ವಿ. ಸಿಂಧು ಕೂಡಾ ವಿಶೇಷ ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಂಧು, ಒಲಿಂಪಿಕ್ ಕ್ರೀಡಾಳುಗಳಿಗೆ ನೀವು ನೀಡಿದ ಪ್ರೋತ್ಸಾಹ, ಸಹಾಯ ಅವಿಸ್ಮರಣೀಯ. ನಿಮ್ಮ ಜೊತೆ ಐಸ್ ಕ್ರೀಂ ಸವಿಯುವ ಅವಕಾಶ ನೀಡಿದ್ದಕ್ಕೆ ಧನ್ಯವಾದ ಮೋದಿ ಜಿ. ಈ ಸಂದರ್ಭದಲ್ಲಿ ನನ್ನ ಕಡೆಯಿಂದ ನಿಮಗೆ ಬ್ಯಾಡ್ಮಿಂಟನ್ ರಾಕೆಟ್ ನ ಉಡುಗೊರೆ ನೀಡುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಕೂಡಾ ಸಿಂಧು ನೀಡಿದ ಉಡುಗೊರೆಯನ್ನು ಖುಷಿಯಿಂದಲೇ ಸ್ವೀಕರಿಸಿದ್ದಾರೆ.