ಕ್ರಿಕೆಟ್ ಲೋಕದಲ್ಲಿ ಪ್ರತಿಯೊಂದು ಪಂದ್ಯ ಪ್ರತಿಯೊಂದು ಎಸೆತವೂ ಅಚ್ಚರಿ. ಊಹಿಸಲಾಗದ ರೀತಿಯಲ್ಲಿ ನಡೆಯುವ ಈ ರೀತಿ ಪಂದ್ಯ ಸಾಗುವುದರಿಂದಲೇ ಕ್ರಿಕೆಟ್ ಇಂದು ಜಗತ್ತಿನ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಅಂದರೆ ವನಿತೆಯರ ವಿಶ್ವಕಪ್ ನ ಅರ್ಹತಾ ಪಂದ್ಯದಲ್ಲಿ ನೇಪಾಳ ತಂಡ 8 ರನ್ ಗೆ ಆಲೌಟಾಗಿರುವುದು!
ಹೌದು, ಶನಿವಾರ ನಡೆದ ವನಿತೆಯರ ವಿಶ್ವಕಪ್ ಟಿ-20 ಟೂರ್ನಿಯ ಅರ್ಹತಾ ಪಂದ್ಯದಲ್ಲಿ ನೇಪಾಳ ಯುವತಿಯರು 8 ರನ್ ಗೆ ಯುನೈಟೆಡ್ ಅರಬ್ ಎಮಿರೆಟ್ಸ್ ತಂಡದ ವಿರುದ್ಧ ಆಲೌಟಾಗಿದ್ದಾರೆ. ಈ ಮೂಲಕ ತಂಡವೊಂದು ಎರಡಂಕಿಯ ಮೊತ್ತವನ್ನೂ ದಾಟದೇ ನಿರ್ಗಮಿಸಿ ಅಚ್ಚರಿ ಮೂಡಿಸಿದೆ.
ಅರ್ಹತಾ ಸುತ್ತಿನಲ್ಲಿ ನೇಪಾಳ, ಕತಾರ್, ಯುಎಇ, ಥಾಯ್ಲೆಂಡ್, ಭೂತಾನ್ ದೇಶಗಳು ಕಣಕ್ಕಿಳಿದಿದ್ದು, ಇದರಲ್ಲಿ ವಿಜೇತ ತಂಡ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2023ರ ವಿಶ್ವಕಪ್ ಟಿ-20 ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಲಿದೆ.
ಇದಕ್ಕೂ ಹಿಂದಿನ ಪಂದ್ಯದಲ್ಲಿ ನೇಪಾಳ ತಂಡ 38 ರನ್ ಗಳಿಗೆ ಕತಾರ್ ತಂಡವನ್ನು ಸೋಲಿಸಿತ್ತು. ಆದರೆ ಈ ಪಂದ್ಯದಲ್ಲಿ ಎರಡಂಕಿಯ ಗಡಿಯನ್ನೂ ತಲುಪದೇ 8 ರನ್ ಗಳಿಗೆ ಪತನಗೊಂಡಿತು.
ನೇಪಾಳದ ಯುವತಿಯರು ಆಲೌಟಾಗಲು ಒಂದು ಗಂಟೆ ಕೂಡ ಬೇಕಾಗಿರಲಿಲ್ಲ. 8.1 ಓವರ್ ಗಳಲ್ಲಿ ಇಡೀ ತಂಡ ಗಂಟುಮೂಟೆ ಕಟ್ಟಿತ್ತು. ಯುಎಇ ವನಿತೆಯರು ಈ ಗುರಿಯನ್ನು 9.1 ಓವರ್ ಗಳಲ್ಲಿ ಮುಟ್ಟಿ ಗೆಲುವು ದಾಖಲಿಸಿದರು.
ಯುಎಇಯ ಮಹಿಕಾ ಗೌರ್ 4 ಓವರ್ ಗಳಲ್ಲಿ 2 ರನ್ ನೀಡಿ 5 ವಿಕೆಟ್ ಪಡೆದರೆ, ನೇಪಾಳದ 5 ಆಟಗಾರ್ತಿಯರು ಮಾತ್ರ ಖಾತೆ ತೆರೆಯುವಲ್ಲಿ ಯಶಸ್ವಿಯಾದರು.