Publish Date: Thu, 18 Jul 2019 (09:46 IST)
Updated Date: Thu, 18 Jul 2019 (09:49 IST)
ಮುಂಬೈ: ವಿಶ್ವಕಪ್ ಮುಗಿದ ಬಳಿಕ ಇದೀಗ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಗೆ ಭಾರೀ ಒತ್ತಾಯಗಳು ಕೇಳಿಬರುತ್ತಿವೆ. ಮುಂಬರುವ ವಿಂಡೀಸ್ ಸರಣಿಗೆ ಧೋನಿಯನ್ನು ಆಯ್ಕೆಮಾಡದೇ ಇರಲೂ ಬಿಸಿಸಿಐ ಚಿಂತನೆ ನಡೆಸುತ್ತಿತ್ತು.
ಆದರೆ ಇದಕ್ಕಿಂತ ಮೊದಲೇ ಧೋನಿ ತಾವಾಗಿಯೇ ವಿಂಡೀಸ್ ಸರಣಿಗೆ ಅಲಭ್ಯರಾಗಿರುವುದಾಗಿ ಬಿಸಿಸಿಗೆ ಹೇಳಿರುವುದಾಗಿ ತಿಳಿದುಬಂದಿದೆ. ವಿಂಡೀಸ್ ವಿರುದ್ಧ ಧೋನಿ ಬದಲು ರಿಷಬ್ ಪಂತ್ ಆಯ್ಕೆಯಾಗುವ ಸಾಧ್ಯತೆಯಿದೆ.
ಧೋನಿ ನಿವೃತ್ತಿಯಾಗುವ ಮೊದಲು ಯುವ ವಿಕೆಟ್ ಕೀಪರ್ ಒಬ್ಬರನ್ನು ಅವರ ಸ್ಥಾನಕ್ಕೆ ತಯಾರು ಮಾಡುವ ಉದ್ದೇಶದಿಂದ ಅವರಾಗಿಯೇ ತಂಡದಿಂದ ಹೊರ ನಡೆಯಲು ನಿರ್ಧರಿಸಿದ್ದಾರೆ. ಇನ್ನು, ಈ ಬಗ್ಗೆ ಆಂಗ್ಲ ಮಾಧ‍್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಮೂಲಗಳು ಧೋನಿಯ ಸ್ಥಾನಕ್ಕೆ ಮತ್ತೊಬ್ಬ ವಿಕೆಟ್ ಕೀಪರ್ ನನ್ನು ಬೆಳೆಸುವ ಉದ್ದೇಶವಿದೆ. ಹೀಗಾಗಿ ವಿಂಡೀಸ್ ಸರಣಿಗೆ ಧೋನಿ ನಂ.1 ವಿಕೆಟ್ ಕೀಪರ್ ಆಗಿರುವುದಿಲ್ಲ. ಒಂದು ವೇಳೆ ಅವರನ್ನು ಆಯ್ಕೆ ಮಾಡಿದರೂ ಆಡುವ ಬಳಗದಲ್ಲಿ ಇರಲ್ಲ ಎಂದಿದ್ದಾರೆ.