ಆಸ್ಟ್ರೇಲಿಯಾ: ಅಡಿಲೇಡ್‌ನಲ್ಲಿ ನಡೆದ ಪಿಂಕ್‌ಬಾಲ್ ಟೆಸ್ಟ್ ಪಂದ್ಯದ ವೇಳೆ ವಿವಾದ ಸೃಷ್ಟಿಸಿದ ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ದಂಡದ ಬಿಸಿ ಮುಟ್ಟಿಸಿದೆ.
ಪಂದ್ಯದ ವೇಳೆ ಸಿರಾಜ್ ಮತ್ತು ಹೆಡ್ ನಡುವೆ ಕೈಸನ್ನೆ ಮತ್ತು ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ಉಭಯ ಆಟಗಾರರಿಗೆ ಐಸಿಸಿ ದಂಡ ವಿಧಿಸಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಅಮಾನತು ಶಿಕ್ಷೆಯಿಂದ ಇಬ್ಬರೂ ಪಾರಾಗಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ವೇಳೆ ಭಾರತದ ವೇಗದ ಬೌಲರ್ ಸಿರಾಜ್ ಮತ್ತು ಹೆಡ್ ನಡುವೆ ಮೈದಾನದಲ್ಲಿಯೇ ವಾಗ್ವಾದ ನಡೆದಿತ್ತು. ಈ ಘಟನೆಯ ವಿಡಿಯೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಘಟನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಉಭಯ ಆಟಗಾರರಿಗೆ ದಂಡ ವಿಧಿಸಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಉಲ್ಲಂಘಿಸಿದ್ದಕ್ಕಾಗಿ ಸಿರಾಜ್‌ಗೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ. ಈ ಕ್ರಮವು, ಬ್ಯಾಟರ್ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದೆ ಎಂದು ಐಸಿಸಿ ಹೇಳಿದೆ.
ಪರ್ತ್‌ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನಲ್ಲಿ 295 ರನ್ಗಳ ಭರ್ಜರಿ ಗೆಲುವು ದಾಖಲಿಸಿದ್ದ ಭಾರತ, 2ನೇ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿತು. ಅಡಿಲೇಡ್ ಓವಲ್ ಮೈದಾನದಲ್ಲಿ ಪಿಂಕ್ ಟೆಸ್ಟ್ ಗೆಲುವು ಮುಂದುವರೆಸಿದ ಆಸ್ಟ್ರೇಲಿಯಾ ತಂಡ, 10 ವಿಕೆಟ್ಗಳ ಸುಲಭ ಗೆಲುವು ಸಾಧಿಸಿತು.