ಮುಂಬೈ: ಡಬ್ಲ್ಯುಪಿಎಲ್ ಕೂಟದ ಅತ್ಯಂತ ಅದೃಷ್ಟಹೀನ ತಂಡವೆಂದರೆ ಬಹುಶಃ ಆರ್ ಸಿಬಿ ಇರಬೇಕು. ಇದುವರೆಗೆ ನಡೆದ ನಾಲ್ಕು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲು ಆರ್ ಸಿಬಿಗೆ ಸಾಧ್ಯವಾಗಿಲ್ಲ.
ನಿನ್ನೆ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯವನ್ನೂ ಆರ್ ಸಿಬಿ 10 ವಿಕೆಟ್ ಗಳಿಂದ ಹೀನಾಯವಾಗಿ ಸೋತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧನಾ ಪಡೆ ಕೇವಲ 138 ರನ್ ಗಳಿಗೆ ಆಲೌಟ್ ಆಗಿತ್ತು.
ಈ ಮೊತ್ತವನ್ನು ಬೆನ್ನತ್ತಿದ ಯುಪಿ ವಾರಿಯರ್ಸ್ 13 ಓವರ್ ಗಳಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು. ಯುಪಿ ಪರ ಬಿರುಸಿನ ಇನಿಂಗ್ಸ್ ಆಡಿದ ಅಲೆಸಾ ಹೀಲೇ ಕೇವಲ 47 ಎಸೆತಗಳಿಂದ ಅಜೇಯ 96 ರನ್ ಸಿಡಿಸಿದರು. ಇನ್ನು ನಾಲ್ಕು ರನ್ ಗಳಿಸಿದ್ದರೂ ಅವರು ಡಬ್ಲ್ಯುಪಿಎಲ್ ಕೂಟದ ಮೊದಲ ಶತಕದ ದಾಖಲೆ ಮಾಡುತ್ತಿದ್ದರು. ಅವರಿಗೆ ತಕ್ಕ ಸಾಥ್ ನೀಡಿದ ದೇವಿಕಾ ವೈದ್ಯ ಅಜೇಯ 36 ರನ್ ಗಳಿಸಿದರು. ಇದರೊಂದಿಗೆ ಆರ್ ಸಿಬಿ ನಾಲ್ಕನೇ ಸೋಲು ಅನುಭವಿಸಿತು. ಇದುವರೆಗೆ ಗೆಲುವಿನ ಖಾತೆ ತೆರೆಯದ ಸ್ಮೃತಿ ಮಂಧನಾ ಪಡೆ ತೀವ್ರ ನಿರಾಸೆ ಅನುಭವಿಸಿತು.