ಕೇಪ್ ಟೌನ್: ಮಹಿಳಾ ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಲೀಗ್ ಹಂತದ ಎರಡನೇ ಪಂದ್ಯವನ್ನು ಆಡಲಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಡಲಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಕಂಡಿದ್ದ ಭಾರತ ವನಿತೆಯರು ಇಂದೂ ಕೂಡಾ ಗೆದ್ದು ಮುಂದಿನ ಹಾದಿ ಸುಗಮಗೊಳಿಸುವ ನಿರೀಕ್ಷೆಯಲ್ಲಿದೆ. ವಿಂಡೀಸ್ ಕೂಡಾ ಪಾಕ್ ಗೆ ಸಮನಾದ ತಂಡ. ಈ ಹಿಂದೆಯೂ ವಿಂಡೀಸ್ ವಿರುದ್ಧ ಭಾರತ ಮೇಲುಗೈ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯ ಗೆಲ್ಲುವುದು ಕಷ್ಟವೇನೂ ಆಗದು.
ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಆಡಿರಲಿಲ್ಲ. ಈ ಪಂದ್ಯಕ್ಕೆ ಅವರು ವಾಪಸಾಗುವ ನಿರೀಕ್ಷೆಯಿದೆ. ಹಾಗಿದ್ದರೂ ಮುಂದಿನ ಪಂದ್ಯಗಳ ದೃಷ್ಟಿಯಿಂದ ತಂಡ ರಿಸ್ಕ್ ತೆಗೆದುಕೊಳ್ಳದು. ಅವರ ಅನುಪಸ್ಥಿತಿಯಲ್ಲೂ ಶಫಾಲಿ ವರ್ಮ, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 6.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.