ಕೋಲ್ಕೊತ್ತಾ: ಇಂದು ಭಾರತ ಮತ್ತು ದ.ಆಫ್ರಿಕಾ ನಡುವೆ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದ್ದು, ಇಂದೇ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ಜನ್ಮದಿನವೂ ಇದೆ.
ಕೊಹ್ಲಿಯನ್ನು ಇಷ್ಟಪಡುವ ಅಸಂಖ್ಯಾತ ಅಭಿಮಾನಿಗಳಿದ್ದು, ಅವರು ಇಂದು ಶತಕ ಗಳಿಸಲಿ ಎಂಬ ಪ್ರಾರ್ಥನೆಯೊಂದಿಗೆ ಮೈದಾನಕ್ಕೆ ಅಭಿಮಾನಿಗಳ ಸಾಗರವೇ ಹರಿದುಬರಲಿದೆ.
ಹೀಗಾಗಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಈಡನ್ ಗಾರ್ಡನ್ ನಲ್ಲಿ ಇಂದು ಪ್ರೇಕ್ಷಕರಿಗೆ ಸುಮಾರು 70 ಸಾವಿರ ಕೊಹ್ಲಿಯ ಮಾಸ್ಕ್, ಲೇಸರ್ ಲೈಟ್ ಪ್ರದರ್ಶನ, ಕೇಕ್ ಕಟಿಂಗ್ ಎಂಬಿತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಇದು ರದ್ದಾಗಿದೆ. ಇದಕ್ಕೆ ಕಾರಣ ಯಾರು ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ.
ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಮೂಲಗಳ ಪ್ರಕಾರ ಈ ಕಾರ್ಯಕ್ರಮಗಳಿಗೆ ಬಿಸಿಸಿಐನಿಂದ ಅನುಮತಿ ದೊರೆಯಲಿಲ್ಲ. ಈ ಕಾರಣಕ್ಕೆ ರದ್ದು ಮಾಡಲಾಯಿತು ಎಂದು ತಿಳಿದುಬಂದಿದೆ. ಕೆಲವರು ಇದರಲ್ಲಿ ಸೌರವ್ ಗಂಗೂಲಿ ಕೈವಾಡವಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದವರಿದ್ದಾರೆ.