ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮುಂದಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಬೇಕು ಎಂದು ಅಭಿಮಾನಿಗಳ ಒತ್ತಾಯ ಕೇಳಿಬರುತ್ತಿದೆ.
ಕೆಎಲ್ ರಾಹುಲ್ ಕಳೆದ ಎರಡು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಆದರೆ ಇತ್ತೀಚೆಗೆ ಮಾಲಿಕ ಸಂಜೀವ್ ಗೊಯೆಂಕಾ ಜೊತೆಗಿನ ವೈಮನಸ್ಯದಿಂದಾಗಿ ರಾಹುಲ್ ಮುಂದಿನ ಸೀಸನ್ ಗೆ ಬೇರೆ ತಂಡ ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದರ ಬೆನ್ನಲ್ಲೇ ಕನ್ನಡಿಗ ಬ್ಯಾಟಿಗನನ್ನು ಆರ್ ಸಿಬಿಗೆ ಬರುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಆರ್ ಸಿಬಿಗೆ ಈಗ ಕೆಎಲ್ ರಾಹುಲ್ ರಂತಹ ಆಟಗಾರನ ಅಗತ್ಯ ತುಂಬಾ ಇದೆ. ಯಾಕೆಂದರೆ ಈ ಸೀಸನ್ ನಲ್ಲಿ ಫಾ ಡು ಪ್ಲೆಸಿಸ್ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿಬಂದಿತ್ತು. ಆರ್ ಸಿಬಿಗೆ ಸಮರ್ಥ ನಾಯಕನ ಅಗತ್ಯವಿದೆ ಎಂಬ ಕೂಗು ಕೇಳಿಬರುತ್ತಿದೆ. ಹೀಗಾಗಿ ರಾಹುಲ್ ತಂಡಕ್ಕೆ ಬಂದರೆ ಅವರು ನಾಯಕತ್ವ ವಹಿಸಿಕೊಳ್ಳಬಲ್ಲರು.
ಇನ್ನೊಂದೆಡೆ ಇದುವರೆಗೆ ತಂಡದ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಗೆ ಇದೇ ಕೊನೆಯ ಐಪಿಎಲ್. ಹೀಗಾಗಿ ಮುಂದಿನ ಸೀಸನ್ ನಲ್ಲಿ ಆರ್ ಸಿಬಿ ಸಮರ್ಥ ವಿಕೆಟ್ ಕೀಪರ್ ಬ್ಯಾಟಿಗನನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಜೊತೆಗೆ ಆರ್ ಸಿಬಿ ತಂಡದಲ್ಲಿ ಕನ್ನಡಿಗರಿಗೆ ಪ್ರಾತಿನಿಧ‍್ಯವೇ ಇಲ್ಲ ಎಂಬ ಆರೋಪ ಕೇಳಿಬರುತ್ತಿದೆ.ಈ ಎಲ್ಲಾ ಕೊರತೆ ನಿಭಾಯಿಸಲು ಕೆಎಲ್ ರಾಹುಲ್ ತಂಡಕ್ಕೆ ಬರಬೇಕಾದ ಅವಶ್ಯಕತೆಯಿದೆ.