Publish Date: Wed, 15 May 2024 (11:08 IST)
Updated Date: Wed, 15 May 2024 (11:13 IST)
ದೆಹಲಿ: ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲಿಕ ಸಂಜೀವ್ ಗೊಯೆಂಕಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೈದಾನದಲ್ಲಿ ಅವರ ವರ್ತನೆ ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಳೆದ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಸಂಜೀವ್ ಮೈದಾನದಲ್ಲೇ ನಾಯಕ ಕೆಎಲ್ ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಸಂಜೀವ್ ದೆಹಲಿಯಲ್ಲಿ ತಮ್ಮ ನಿವಾಸಕ್ಕೆ ರಾಹುಲ್ ರನ್ನು ಕರೆಸಿಕೊಂಡು ಔತಣ ನೀಡಿ ಪ್ಯಾಚ್ ಅಪ್ ಆಗಿದೆ ಎಂದು ಸೂಚನೆ ಕೊಟ್ಟಿದ್ದರು.
ಆದರೆ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ 5 ರನ್ ಗಳಿಸಿ ಔಟಾಗುತ್ತಿದ್ದಂತೇ ಸಂಜೀವ್ ಮುಖದಲ್ಲಿ ನಗುವಿತ್ತು. ಇದನ್ನು ನೋಡಿ ನೆಟ್ಟಿಗರು ಮತ್ತೆ ಪ್ಯಾಚ್ ಅಪ್ ಆಗಿದೆ ಎಂದು ಪೋಸ್ ಕೊಟ್ಟಿದ್ದೆಲ್ಲಾ ಸುಳ್ಳಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಔಟಾದಾಗ ಸಂಜೀವ್ ನಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನದೇ ತಂಡದ ನಾಯಕ ಔಟಾಗಿದ್ದಕ್ಕೆ ಸಂಭ್ರಮಿಸುವಷ್ಟು ಕೆಟ್ಟ ಮನಸ್ಸಾ ನಿಮ್ಮದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಆವೃತ್ತಿಗೆ ಖಂಡಿತಾ ರಾಹುಲ್ ರನ್ನು ಸಂಜೀವ್ ಬಿಟ್ಟುಕೊಡಬಹುದು ಎಂದಿದ್ದಾರೆ.