ಹೈದರಾಬಾದ್: ಐಪಿಎಲ್ 2024 ರಲ್ಲಿ ಕೆಎಲ್ ರಾಹುಲ್ ನಿಧಾನಗತಿಯ ಬ್ಯಾಟಿಂಗ್ ನೋಡಿ ನೆಟ್ಟಿಗರು ಇನ್ನಿಲ್ಲದಂತೆ ಅವರನ್ನು ಟ್ರೋಲ್ ಮಾಡಿದ್ದಾರೆ. ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡದೇ ಇದ್ದಿದ್ದೇ ಒಳ್ಳೆಯದಾಯ್ತು ಎಂದಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ 33 ಎಸೆತ ಎದುರಿಸಿ ಗಳಿಸಿದ್ದು ಕೇವಲ 29 ರನ್. ಈ ಇನಿಂಗ್ಸ್ ನಲ್ಲಿ ಏಕೈಕ ಬೌಂಡರಿ ಮತ್ತು ಸಿಕ್ಸ್ ಸೇರಿತ್ತು. ಅವರ ಈ ನಿಧಾನಗತಿಯ ಇನಿಂಗ್ಸ್ ಅಭಿಮಾನಿಗಳಿಗೆ ಆಕ್ರೋಶ ತರಿಸಿತ್ತು.
ಟಿ20 ಕ್ರಿಕೆಟ್ ನಲ್ಲಿ ಟೆಸ್ಟ್ ಶೈಲಿಯಲ್ಲಿ ಬ್ಯಾಟ್ ಬೀಸಿದ ರಾಹುಲ್ ರನ್ನು ಮುಂಬರುವ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡದೇ ಇರುವುದು ಸಮಾಧಾನದ ಸಂಗತಿ. ಇದಕ್ಕೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಧನ್ಯವಾದ ಸಲ್ಲಿಸಬೇಕು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ರಾಹುಲ್ ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ನಿಧಾನಗತಿಯ ಇನಿಂಗ್ಸ್ ನೋಡಿದ ಮೇಲೆ ಅವರನ್ನು ಆಯ್ಕೆ ಮಾಡದೇ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಭಿನಂದಿಸಿದ್ದಾರೆ. ರಾಹುಲ್ ಲಕ್ನೋ ತಂಡದ ಪ್ರಮುಖ ಆಟಗಾರ. ಆದರೆ ಅವರು ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರಿಂದ ತಂಡ ನಿರೀಕ್ಷಿಸಿದಷ್ಟು ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.