ಮುಂಬೈ: ಟೀಂ ಇಂಡಿಯಾ ಏಕದಿನ ತಂಡದಿಂದಲೂ ರೋಹಿತ್ ಶರ್ಮಾ ದೂರ ಸರಿಯುವ ಮಾತುಗಳು ಈಗ ದಟ್ಟವಾಗಿ ಕೇಳಬರುತ್ತಿದೆ. ಈ ಹಿನ್ನಲೆಯಲ್ಲಿ ಅವರ ಹೊರತಾಗಿ ಟೀಂ ಇಂಡಿಯಾಗೆ ಯಾರು ನಾಯಕರಾಗಬಹುದು ನೋಡೋಣ.
ರೋಹಿತ್ ಶರ್ಮಾ ಈಗಾಗಲೇ ಟಿ20 ತಂಡದಿಂದ ದೂರವುಳಿದಿದ್ದಾರೆ. ಇದೀಗ ಏಕದಿನ ತಂಡದಿಂದಲೂ ಹೊರಗುಳಿದು ಹೊಸ ಆಟಗಾರರು ಬೆಳೆಯಲು ಅವಕಾಶ ಮಾಡಿಕೊಡಲಿದ್ದಾರೆ. ಸದ್ಯದಲ್ಲೇ ಆಯ್ಕೆಸಮಿತಿಯೂ ಅವರ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದೆ. ಈ ನಡುವೆ ರೋಹಿತ್ ಬದಲಿಗೆ ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಲು ಮೂವರು ಕ್ರಿಕೆಟಿಗರು ರೇಸ್ ನಲ್ಲಿದ್ದಾರೆ.
ಕೆಎಲ್ ರಾಹುಲ್: ಇತ್ತೀಚೆಗೆ ನಡೆದ ವಿಶ್ವಕಪ್ ನಲ್ಲಿ ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಜೊತೆಗೆ ನಾಯಕ ರೋಹಿತ್ ಗೆ ಫೀಲ್ಡಿಂಗ್ ಸೆಟ್ ಮಾಡುವಾಗ ಮತ್ತು ಡಿಆರ್ ಎಸ್ ತೆಗೆದುಕೊಳ್ಳುವಲ್ಲಿ ರಾಹುಲ್ ತೋರುತ್ತಿದ್ದ ಕರಾರುವಾಕ್ ನಿರ್ಧಾರ ನೋಡಿದರೆ ಏಕದಿನ ಪಂದ್ಯಗಳಿಗೆ ಅವರೇ ಮುಂದಿನ ನಾಯಕನಾಗುವ ಎಲ್ಲಾ ಸಾಧ‍್ಯತೆಗಳಿವೆ.
ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿದರೆ ಹಾರ್ದಿಕ್ ಪಾಂಡ್ಯರನ್ನು ಟಿ20 ಮತ್ತು ಏಕದಿನ ತಂಡಗಳಿಗೆ ಖಾಯಂ ನಾಯಕರಾಗಿ ಮಾಡುವ ಸಾಧ‍್ಯತೆಯಿದೆ. ಆದರೆ ಸದ್ಯಕ್ಕೆ ಹಾರ್ದಿಕ್ ಗಾಯಗೊಂಡಿದ್ದಾರೆ. ಮುಂದಿನ ವರ್ಷವಷ್ಟೇ ಅವರು ಕ್ರಿಕೆಟ್ ಕಣಕ್ಕೆ ಮರಳುವ ಸಾಧ್ಯತೆಯಿದೆ.
ಜಸ್ಪ್ರೀತ್ ಬುಮ್ರಾ: ಟೀಂ ಇಂಡಿಯಾದ ಪ್ರಮುಖ ವೇಗಿಗೆ ಈಗಾಗಲೇ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಅನುಭವವಿದೆ. ಟಿ20 ಸರಣಿಯಲ್ಲೂ ನಾಯಕರಾಗಿ ಸರಣಿ ಜಯ ಗಳಿಸಿದ್ದಾರೆ. ತಂಡದ ಪ್ರಮುಖ ವೇಗಿಯಾಗಿರುವ ಬುಮ್ರಾಗೆ ಫಿಟ್ನೆಸ್ ಒಂದೇ ಸಮಸ್ಯೆ. ಫಿಟ್ ಆಗಿದ್ದರೆ ಅವರೂ ನಾಯಕತ್ವದ ರೇಸ್ ನಲ್ಲಿರಲಿದ್ದಾರೆ.