ರಾಂಚಿ: ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 21 ರನ್ ಗಳಿಂದ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 176 ರನ್ ಗಳ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಗರು ಕೈ ಕೊಟ್ಟಿದ್ದು ದುಬಾರಿಯಾಯಿತು. ಏಕದಿನ ಸರಣಿಯಲ್ಲಿ ಮಿಂಚಿದ್ದ ಶುಬ್ಮನ್ ಗಿಲ್ 7 ರನ್ ಗೆ ಔಟಾದರೆ ಇಶಾನ್ ಕಿಶನ್ 4, ರಾಹುಲ್ ತ್ರಿಪಾಠಿ ಶೂನ್ಯಕ್ಕೆ ನಿರ್ಗಮಿಸಿದರು. ಇದರಿಂದಾಗಿ ಟೀಂ ಇಂಡಿಯಾ ಒತ್ತಡಕ್ಕೆ ಸಿಲುಕಿತು. ಈ ವೇಳೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಜೋಡಿ ಚೇತರಿಕೆಯ ಲಕ್ಷಣ ತೋರಿದರಾದರೂ 47 ರನ್ ಗಳಿಸಿದ್ದ ಸೂರ್ಯ ಔಟಾಗುವುದರೊಂದಿಗೆ ಭಾರತ ಮತ್ತೆ ಕುಸಿತಕ್ಕೊಳಗಾಯಿತು. ಪಾಂಡ್ಯ 21 ರನ್, ದೀಪಕ್ ಹೂಡಾ 10 ರನ್ ಗಳಿಸಲಷ್ಟೇ ಶಕ್ತರಾದರು. ಈ ನಡುವೆ ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್ ಸುಂದರ್ ಕೇವಲ 28 ಎಸೆತಗಳಿಂದ 50 ರನ್ ಗಳಿಸಿ ಮಿಂಚಿದರು. ಇದರೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 0-1 ಅಂತರದಿಂದ ಹಿನ್ನಡೆ ಅನುಭವಿಸಿತು.