ಬೆಂಗಳೂರು: ಮೊನ್ನೆಯಷ್ಟೇ ಆರ್ ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ ಮಾಜಿ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ್ದು ವಿವಾದವಾಗಿತ್ತು.
ಕೊಹ್ಲಿ ನಾಯಕತ್ವ ಕಳೆದುಕೊಳ್ಳಲು ಗಂಗೂಲಿ ಕಾರಣ ಎಂದು ಸುದ್ದಿಗಳಿತ್ತು. ಈ ಬಗ್ಗೆ ಕೊಹ್ಲಿ ಕೂಡಾ ಗಂಗೂಲಿ ವಿರುದ್ಧ ಈ ಹಿಂದೆ ಬಹಿರಂಗವಾಗಿಯೇ ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಇಬ್ಬರ ನಡುವೆ ಶೀತಲಸಮರವಿತ್ತು.
ಇದೀಗ ಐಪಿಎಲ್ ಪಂದ್ಯದ ವೇಳೆ ಗಂಗೂಲಿ ಬೇಕೆಂದೇ ಕೊಹ್ಲಿಯನ್ನು ಕಡೆಗಣಿಸಿ ಮತ್ತೊಬ್ಬ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡಲು ಮುಂದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೊಹ್ಲಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಿಂದ ಗಂಗೂಲಿಯನ್ನು ಅನ್ ಫಾಲೋ ಮಾಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಕಂಡ ಇಬ್ಬರು ಶ್ರೇಷ್ಠ ನಾಯಕರ ನಡುವಿನ ಶೀತಲ ಸಮರ ಮತ್ತಷ್ಟು ಗಾಢವಾಗಿದೆ.