ಬೆಂಗಳೂರು: ಐಪಿಎಲ್ 2025 ರಲ್ಲಿ ಆರ್ ಸಿಬಿ ಕ್ಯಾಪ್ಟನ್ ಆಗಿ ಮತ್ತೆ ವಿರಾಟ್ ಕೊಹ್ಲಿಯೇ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.
ಆರ್ ಸಿಬಿಯಲ್ಲಿ ಇದುವರೆಗೆ ಒಂದೇ ಒಂದು ಕಪ್ ಗೆದ್ದಿಲ್ಲ ಎಂಬ ಕೊರಗು ವಿರಾಟ್ ಕೊಹ್ಲಿಗಿದೆ. ಅವರು ನಾಯಕನಾಗಿದ್ದಾಗ ಅಥವಾ ಆಟಗಾರನಾಗಿದ್ದಾಗ ಈ ಕನಸು ಈಡೇರಿರಲಿಲ್ಲ. ಒಂದೇ ಒಂದು ಕಪ್ ಗೆಲ್ಲಬೇಕು ಎಂಬುದು ನನ್ನ ಕನಸು ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲೂ ಕೊಹ್ಲಿ ಹೇಳಿಕೊಂಡಿದ್ದರು.
ಇದೀಗ ಫಾ ಡು ಪ್ಲೆಸಿಸ್ ರನ್ನು ರಿಲೀಸ್ ಮಾಡಿ ತಂಡಕ್ಕೆ ಹೊಸ ನಾಯಕನನ್ನು ಹುಡುಕಾಡುತ್ತಿದೆ ಆರ್ ಸಿಬಿ. ಈ ಹಂತದಲ್ಲಿ ಕೊಹ್ಲಿಯೇ ಮತ್ತೆ ತಂಡವನ್ನು ಮುನ್ನಡೆಸಲು ಸೂಕ್ತ ಎಂಬ ಮಾತು ಕೇಳಿಬರುತ್ತಿತ್ತು. ಅದರಂತೆ ಈಗ ಆರ್ ಸಿಬಿ ಕೊಹ್ಲಿಗೇ ಮತ್ತೊಮ್ಮೆ ನಾಯಕತ್ವದ ಹೊಣೆ ನೀಡುವ ಸುದ್ದಿ ದಟ್ಟವಾಗಿದೆ.
ಈ ಬಾರಿ ತಂಡಕ್ಕೆ ಕೆಎಲ್ ರಾಹುಲ್ ರನ್ನು ಕರೆಸಿಕೊಂಡು ಅವರನ್ನೇ ನಾಯಕನಾಗಿ ಮಾಡಬಹುದು ಎಂಬ ಸುದ್ದಿಗಳಿತ್ತು. ಆದರೆ ರಾಹುಲ್ ಕೂಡಾ ಐಪಿಎಲ್ ನಲ್ಲಿ ನಾಯಕನಾಗಿ ಹೇಳಿಕೊಳ್ಳುವ ಯಶಸ್ಸು ಪಡೆದಿಲ್ಲ. ಹೀಗಾಗಿ ಕೊಹ್ಲಿಯನ್ನೇ ನಾಯಕನನ್ನಾಗಿ ಮಾಡಿ ಅವರ ನಾಯಕತ್ವದಲ್ಲೇ ತಂಡ ಕಪ್ ಗೆಲ್ಲುವಂತಾದರೆ ಇಷ್ಟು ವರ್ಷ ಆರ್ ಸಿಬಿಗೆ ನಿಷ್ಠರಾಗಿ ಆಡಿದ ಕೊಹ್ಲಿಗೆ ಸೂಕ್ತ ಗೌರವ ನೀಡಿದಂತಾಗುತ್ತದೆ ಎಂಬುದು ಮ್ಯಾನೇಜ್ ಮೆಂಟ್ ಲೆಕ್ಕಾಚಾರ.