Publish Date: Mon, 20 May 2024 (08:50 IST)
Updated Date: Mon, 20 May 2024 (09:01 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಸಿಎಸ್ ಕೆ ತಂಡದ ವಿರುದ್ಧ ಗೆದ್ದು ಪ್ಲೇ ಆಫ್ ಗೇರಿದ ಸಂಭ್ರಮದಲ್ಲಿದ್ದ ಆರ್ ಸಿಬಿ ಆಟಗಾರರು ಕೆಲವು ವಿವಾದಕ್ಕೂ ಕಾರಣವಾಗಿದ್ದಾರೆ. ಪಂದ್ಯ ಮುಗಿದ ಕೂಡಲೇ ಕೊಹ್ಲಿ ನೇರವಾಗಿ ಧೋನಿಯನ್ನು ಹುಡುಕಿಕೊಂಡು ಸಿಎಸ್ ಕೆ ಡ್ರೆಸ್ಸಿಂಗ್ ರೂಂಗೆ ತೆರಳಿದ್ದಾರೆ.
ಗೆಲುವಿನ ಬಳಿಕ ಧೋನಿ ಆರ್ ಸಿಬಿ ಆಟಗಾರರಿಗೆ ಕೈ ಕುಲುಕಲು ತಂಡದ ಸಾರಥ್ಯ ವಹಿಸಿದ್ದರು. ಆದರೆ ಆರ್ ಸಿಬಿ ಆಟಗಾರರು ತಮ್ಮ ಸಂಭ್ರಮದಲ್ಲಿ ಮುಳುಗಿದ್ದರು. ಹೀಗಾಗಿ ಧೋನಿ ಋತುರಾಜ್ ಗಾಯಕ್ ವಾಡ್ ರನ್ನು ಮುಂದೆ ಬಿಟ್ಟು ಕೈ ಕುಲುಕಲು ಹೇಳಿ ಮೈದಾನದಿಂದ ಹೊರನಡೆದಿದ್ದರು. ವಿರಾಟ್ ಕೊಹ್ಲಿಗೂ ಧೋನಿ ಕೈಕುಲುಕಲಿಲ್ಲ.
ಇದು ಕೊಹ್ಲಿ ಗಮನಕ್ಕೆ ಬಂದಿತ್ತು. ಹೀಗಾಗಿ ಕೊಹ್ಲಿ ನೇರವಾಗಿ ಧೋನಿಯನ್ನು ಹುಡುಕಿಕೊಂಡು ಸಿಎಸ್ ಕೆ ಡ್ರೆಸ್ಸಿಂಗ್ ರೂಂಗೆ ತೆರಳಿದ್ದರು. ಧೋನಿ ಎಂದರೆ ಕೊಹ್ಲಿಗೆ ಎಷ್ಟು ಗೌರವ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಧೋನಿ ತಮ್ಮ ಕ್ಯಾಪ್ಟನ್, ನಾನು ಸಂಕಷ್ಟದಲ್ಲಿದ್ದಾಗ ಏನೊಂದೂ ಕೇಳದೇ ಸಹಾಯಕ್ಕೆ ಬಂದವರು ಎಂದು ಕೊಹ್ಲಿ ಹೇಳುತ್ತಲೇ ಇರುತ್ತಾರೆ.
ಇದೀಗ ಧೋನಿ ಬೇಸರಿಂದ ಮೈದಾನದಿಂದ ಹೊರನಡೆದಿದ್ದು ಕೊಹ್ಲಿ ಗಮನಿಸಿದ್ದಾರೆ. ಹೀಗಾಗಿ ಧೋನಿಯನ್ನು ಹುಡುಕುತ್ತಾ ನೇರವಾಗಿ ಅವರು ಸಿಎಸ್ ಕೆ ಡ್ರೆಸ್ಸಿಂಗ್ ರೂಂಗೆ ತೆರಳಿದ್ದಾರೆ. ಆರ್ ಸಿಬಿ ಆಟಗಾರರ ವರ್ತನೆ ಸಿಎಸ್ ಕೆ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿತ್ತು.