ಬೆಂಗಳೂರು: ಐಪಿಎಲ್ ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ಮಹತ್ವದ ಪಂದ್ಯ ಲೀಗ್ ಪಂದ್ಯ ನಡೆಯಲಿದೆ.
ಈ ಪಂದ್ಯದಲ್ಲಿ 18 ಓವರ್ ಗಳಲ್ಲಿ ಅಥವಾ 18 ರನ್ ಗಳ ಅಂತರದಿಂದ ಗೆದ್ದರೆ ಮಾತ್ರ ಆರ್ ಸಿಬಿಗೆ ಪ್ಲೇ ಆಫ್ ಗೇರುವ ಅವಕಾಶ ಸಿಗಲಿದೆ. ಒಂದು ವೇಳೆ ಸಿಎಸ್ ಕೆ ಸೋತರೆ ಟೂರ್ನಿಯಿಂದ ಹೊರಹೋಗಬೇಕಾಗುತ್ತದೆ. ಮಳೆಯಿಂದ ಪಂದ್ಯ ರದ್ದಾದರೆ ಅಥವಾ ಸಿಎಸ್ ಕೆ ಪಂದ್ಯ ಗೆದ್ದರೆ ಆರ್ ಸಿಬಿ ಟೂರ್ನಿಯಿಂದ ಹೊರಬೀಳಲಿದೆ.
ಹೀಗಾಗಿ ಈ ಪಂದ್ಯಕ್ಕೆ ಫೈನಲ್ ಪಂದ್ಯದ ಕಳೆ ಬಂದಿದೆ. ಆದರೆ ಇದರ ನಡುವೆ ಅಭಿಮಾನಿಗಳಿಗೆ ಇಂದಿನ ಪಂದ್ಯಕ್ಕೆ ಮಳೆ ಬಂದರೆ ಎಂಬ ಭೀತಿ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಮಳೆ ಬಂದರೆ ಎಂಬ ಭೀತಿಯಿದೆ.
ಆದರೆ ಇಂದು ಅಭಿಮಾನಿಗಳ ಅದೃಷ್ಟವೋ, ತಂಡದ ಅದೃಷ್ಟವೋ ಬೆಳಗ್ಗಿನಿಂದ ಕೆಲವೊಮ್ಮೆ ಮಾತ್ರ ಮೋಡ ಕವಿದ ವಾತಾವರಣ ಬಿಟ್ಟರೆ ಬಿಸಿಲಿನ ವಾತಾವರಣವಿದೆ. ಇಂದಿನ ಹವಾಮಾನ ವರದಿ ಪ್ರಕಾರ ಮಳೆ ಬರಬಹುದು ಎಂದಿತ್ತು. ಆದರೆ ಮಹತ್ವದ ಪಂದ್ಯಕ್ಕೆ ಇಂದು ವರುಣನೂ ಅವಕಾಶ ಮಾಡಿಕೊಡುವ ಲಕ್ಷಣ ಕಾಣುತ್ತಿದೆ. ಚಿನ್ನಸ್ವಾಮಿ ಮೈದಾನದ ಬಳಿ ಮೋಡ ಕೂಡಾ ಚದುರಿದ್ದು ಆಕಾಶ ನಿರ್ಮಲವಾಗಿದೆ. ಹೀಗಾಗಿ ಇಂದು ಪಂದ್ಯ ನಡೆಯುವುದು ಖಚಿತ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.