ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹತ್ವದ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಆರ್ ಸಿಬಿಗೆ ಪ್ಲೇ ಆಫ್ ಗೇರಲು ಅವಕಾಶ ಸಿಗಲಿದೆ. ಅತ್ತ ಸಿಎಸ್ ಕೆಗೂ ಪ್ಲೇ ಆಫ್ ದೃಷ್ಟಿಯಿಂದ ಈ ಪಮದ್ಯ ಗೆಲ್ಲಲೇಬೇಕು.
ಎರಡೂ ತಂಡಗಳ ಪರಿಸ್ಥಿತಿ ಇದೇ ಆಗಿರುವಾಗ ಮ್ಯಾಚ್ ಎಷ್ಟು ಪೈಪೋಟಿಯಿಂದ ಕೂಡಿರಬಹುದು ಎಂದು ಯೋಚಿಸಿದರೇ ಅಭಿಮಾನಿಗಳಿಗೆ ರೋಮಾಂಚನವಾಗುತ್ತಿದೆ. ಇದೇ ಕಾರಣಕ್ಕೆ ಇಂದಿನ ಪಂದ್ಯಕ್ಕೆ ಈಗಾಗಲೇ ಚಿನ್ನಸ್ವಾಮಿ ಮೈದಾನದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.
ಆದರೆ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ನಾಳೆಯ ಹವಾಮಾನ ವರದಿ ಪ್ರಕಾರವೂ ಮಳೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಮಳೆ ಬಂದು ಪಂದ್ಯ ರದ್ದಾಗದಿದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆ ಬಂದರೆ ಯಾರಿಗೆ ಲಾಭ? ಯಾರಿಗೆ ನಷ್ಟ ಎಂದು ನೋಡೋಣ.
ಸದ್ಯಕ್ಕೆ 13 ಪಂದ್ಯಗಳಿಂದ 7 ಪಂದ್ಯ ಗೆದ್ದು 14 ಅಂಕ ಪಡೆದಿರುವ ಸಿಎಸ್ ಕೆ ಆರ್ ಸಿಬಿಗಿಂತ ಮುಂದಿದೆ. ಇತ್ತ ಆರ್ ಸಿಬಿ 13 ಪಂದ್ಯಗಳಿಂದ 6 ಪಂದ್ಯ ಗೆದ್ದುಕೊಂಡಿದೆ. ಆದರೆ ನೆಟ್ ರನ್ ರೇಟ್ ಆಧಾರದಲ್ಲಿ ಸಿಎಸ್ ಕೆಯನ್ನು ಆರ್ ಸಿಬಿ 18 ಓವರ್ ಗಳಲ್ಲಿ ಅಥವಾ 18 ರನ್ ಗಳಿಂದ ಸೋಲಿಸಿದರೆ ಪ್ಲೇ ಆಫ್ ಪ್ರವೇಶಿಸಲಿದೆ.
ಒಂದು ವೇಳೆ ಬಂದು ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ ಒಂದು ಅಂಕ ಹಂಚಿಕೊಳ್ಳಲಿವೆ. ಆಗ ಸಿಎಸ್ ಕೆ 15 ಅಂಕ ಪಡೆದುಕೊಳ್ಳಲಿದೆ. ಆದರೆ ಆರ್ ಸಿಬಿ 13 ಅಂಕಕ್ಕೆ ತೃಪ್ತಿಪಟ್ಟುಕೊಳ‍್ಳಲಿದೆ. ಇದರಿಂದಾಗಿ ಸಿಎಸ್ ಕೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಮಳೆ ಬರಲಿ ಎಂದು ಸಿಎಸ್ ಕೆ ಅಭಿಮಾನಿಗಳು ಪ್ರಾರ್ಥಿಸಬಹುದು. ಆದರೆ ಆರ್ ಸಿಬಿ ಅಭಿಮಾನಿಗಳು ಮಳೆ ಬಾರದಂತೆ ಪ್ರಾರ್ಥನೆ ಮಾಡಬಹುದು.