Publish Date: Wed, 20 Mar 2024 (09:13 IST)
Updated Date: Wed, 20 Mar 2024 (09:24 IST)
ಬೆಂಗಳೂರು: ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಒಂದು ವಿಶೇಷ ಮನವಿ ಮಾಡಿದ್ದಾರೆ. ಆದರೂ ಅಭಿಮಾನಿಗಳು ಮಾತ್ರ ನಾವು ನಿಮ್ಮ ಮಾತು ಕೇಳಲ್ಲ ಎಂದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಂಡದ ಹೊಸ ಜೆರ್ಸಿ ಅನಾವರಣವೂ ನಡೆದಿದೆ. ಕೊಹ್ಲಿ ಮೈದಾನದಲ್ಲಿದ್ದ ವೇದಿಕೆಗೆ ಬರುತ್ತಿದ್ದಂತೇ ಪ್ರೇಕ್ಷಕರು ಜೋರಾಗಿ ಕೂಗಿ ತಮ್ಮ ಖುಷಿ ವ್ಯಕ್ತಪಡಿಸಿದರು.
ನಿರೂಪಕರೂ ಕೊಹ್ಲಿಯನ್ನು ಕಿಂಗ್ ಎಂದು ಕರೆದರು. ಆದರೆ ಇದರಿಂದ ಕೊಹ್ಲಿ ಮುಜುಗರಗೊಂಡರು. ದಯವಿಟ್ಟು ನನ್ನನ್ನು ಕಿಂಗ್ ಎನ್ನಬೇಡಿ. ನನಗೆ ಮುಜುಗರವಾಗುತ್ತದೆ. ವಿರಾಟ್ ಎನ್ನಿ ಸಾಕು ಎಂದಿದ್ದಾರೆ. ಆದರೆ ಕೊಹ್ಲಿ ಮಾತು ಕೇಳಿದ ಅಭಿಮಾನಿಗಳು ನಾವು ನಿಮ್ಮ ಮಾತು ಕೇಳಲ್ಲ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ಮನವಿಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ನಮಗೆ ನೀವು ಎಂದೆಂದಿಗೂ ಕಿಂಗ್. ನೀವು ಏನೇ ಹೇಳಿದರೂ ನಿಮ್ಮನ್ನು ಕಿಂಗ್ ಎನ್ನುವುದನ್ನು ನಾವು ಬಿಡಲ್ಲ ಎಂದಿದ್ದಾರೆ. ಆರ್ ಸಿಬಿ ಜೆರ್ಸಿ ಅನಾವರಣ ವೇದಿಕೆಯಲ್ಲಿ ಆರ್ ಸಿಬಿ ನಾಯಕ ಫಾ ಡು ಪ್ಲೆಸಿಸ್, ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ, ಆರ್ ಸಿಬಿ ಮಾಲಿಕರು ಕೂಡಾ ಉಪಸ್ಥಿತರಿದ್ದರು.