Publish Date: Wed, 20 Mar 2024 (09:00 IST)
Updated Date: Wed, 20 Mar 2024 (09:11 IST)
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆರ್ ಸಿಬಿ ಅನ್ ಬಾಕ್ಸ್ ವರ್ಣರಂಜಿತ ಕಾರ್ಯಕ್ರಮಕ್ಕೆ ಮಹಿಳಾ ಆರ್ ಸಿಬಿ ತಂಡ ಹಾಜರಿತ್ತು. ಆದರೆ ಡಬ್ಲ್ಯುಪಿಎಲ್ ಗೆಲುವಿನ ರೂವಾರಿಯಾದ ಎಲ್ಲಿಸ್ ಪೆರ್ರಿ ನಿನ್ನೆಯ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಆರ್ ಸಿಬಿ ಅಭಿಮಾನಿಗಳಿಗೆ ಈಗ ಎಲ್ಲಿಸ್ ಪೆರ್ರಿ ಎಂದರೆ ಫೇವರಿಟ್. ಈ ಡಬ್ಲ್ಯುಪಿಎಲ್ ಫೈನಲ್ ವರೆಗೆ ಆರ್ ಸಿಬಿ ಬರಲು ಮತ್ತು ಫೈನಲ್ ನಲ್ಲೂ ಗೆಲುವು ಕಂಡಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಎಲ್ಲಿಸ್ ಪೆರ್ರಿ. ಪ್ಲೇ ಆಫ್ ಪಂದ್ಯದಲ್ಲಿ ಏಕಾಂಗಿಯಾಗಿ ಮುಂಬೈಗೆ ಸೋಲುಣಿಸಿ ಫೈನಲ್ ಗೇರಿಸಿದ ದಿಟ್ಟ ಆಟಗಾರ್ತಿ.
ಹೀಗಾಗಿಯೇ ಆರ್ ಸಿಬಿ ಫ್ಯಾನ್ಸ್ ಈಗ ಸ್ಮೃತಿ ಮಂಧಾನರಷ್ಟೇ ಎಲ್ಲಿಸ್ ಪೆರ್ರಿಯನ್ನೂ ಅಭಿಮಾನದಿಂದ ನೋಡುತ್ತಾರೆ. ಆದರೆ ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಟಗಾರ್ತಿ ನಿನ್ನೆಯ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದಕ್ಕೆ ಕಾರಣ ಅವರೀಗ ಆಸ್ಟ್ರೇಲಿಯಾ ಪರ ಕ್ರಿಕೆಟ್ ಸರಣಿ ಆಡುತ್ತಿರುವುದು.
ಹಾಗಂತ ಎಲ್ಲಿಸ್ ಆರ್ ಸಿಬಿ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಮಹಿಳಾ ತಂಡ ನಿನ್ನೆ ಕಪ್ ನೊಂದಿಗೆ ಮೈದಾನ ಪ್ರವೇಶಿಸಿದಾಗ ಅಭಿಮಾನಿಗಳು ಭಾರೀ ಕರಾಡತನದೊಂದಿಗೆ ಸ್ವಾಗತಿಸಿದರು. ಫಾ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮೊದಲಾದವರ ಪುರುಷರ ತಂಡ ಮಹಿಳೆಯರಿಗೆ ಗಾರ್ಡ್ ಆಫ್ ಆನರ್ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಹಿಳಾ ಆಟಗಾರ್ತಿಯರು ಎಲ್ಲಿಸ್ ಪೆರ್ರಿಯನ್ನು ಮರೆಯಲಿಲ್ಲ. ಆಕೆಗೆ ವಿಡಿಯೋ ಕಾಲ್ ಮಾಡಿ ಸ್ಮೃತಿ ಮಂಧಾನ ಅಭಿಮಾನಿಗಳನ್ನು ತೋರಿಸುವ ಮೂಲಕ ಅವರನ್ನೂ ಸಂಭ್ರಮದಲ್ಲಿ ಒಳಗೊಳ್ಳುವಂತೆ ಮಾಡಿದರು.