ಬೆಂಗಳೂರು: ಐಪಿಎಲ್ ನಲ್ಲಿ ಮುಖಾಮುಖಿಯಾದಾಗಲೆಲ್ಲಾ ಕಿತ್ತಾಡಿಕೊಂಡಿದ್ದ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಈಗ ನನ್ನ ನಿನ್ನ ನಡುವೆ ಏನಿಲ್ಲ ಎಂದು ಹೆಗಲಿಗೆ ಕೈ ಹಾಕಿಕೊಂಡು ನಗುತ್ತಾ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆದಿತ್ತು. ಈ ಬಾರಿ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊಹ್ಲಿ-ಗಂಭೀರ್ ಮುಖಾಮುಖಿಯಾದರೆ ಒಬ್ಬರಿಗೊಬ್ಬರು ನೋಡಲ್ಲ. ಹಳೇ ವೈಷಮ್ಯ ಮುಂದುವರಿಸುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು.
ಆದರೆ ಎಲ್ಲರೂ ಶಾಕ್ ಆಗುವಂತೆ ಕೊಹ್ಲಿ-ಗಂಭೀರ್ ವರ್ತಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿದ್ದಾರೆ. ಗಂಭೀರ್ ತಾವೇ ಮುಂದೆ ಬಂದು ಕೊಹ್ಲಿಗೆ ಹಸ್ತಾಲಾಘವ ನೀಡಿದ್ದಾರೆ. ಈ ವೇಳೆ ಕೊಹ್ಲಿಯೂ ಕೈ ಚಾಚಿದ್ದಾರೆ. ಬಳಿಕ ಕೊಹ್ಲಿಯನ್ನು ತಬ್ಬಿ ಗಂಭೀರ್ ಏನನ್ನೋ ನಗು ನಗುತ್ತಾ ಕೇಳಿದ್ದಾರೆ. ಇದಕ್ಕೆ ಕೊಹ್ಲಿಯೂ ನಗುತ್ತಲೇ ಉತ್ತರಿಸಿದ್ದಾರೆ.
ಹಳೆಯ ಕೋಪ-ತಾಪಗಳನ್ನೆಲ್ಲಾ ಮರೆತು ಈ ಇಬ್ಬರೂ ಕ್ರಿಕೆಟಿಗರು ಪರಸ್ಪರ ಆಲಂಗಿಸಿಕೊಂಡು ಕ್ರೀಡಾ ಸ್ಪೂರ್ತಿ ಮೆರೆದಿದ್ದು ನೆರೆದಿದ್ದ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.