ನವದೆಹಲಿ: ಕಳಪೆ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಸ್ಟಾರ್ ಆಟಗಾರರೆಲ್ಲಾ ಈಗ ರಣಜಿ ಕ್ರಿಕೆಟ್ ನತ್ತ ಗಮನ ಹರಿಸಿದ್ದಾರೆ. ಇನ್ನೇನು ಕೊಹ್ಲಿ ರಣಜಿ ಆಡಬೇಕು ಎನ್ನುವಷ್ಟರಲ್ಲಿ ಅಲ್ಲಿ ನೋವು ಶುರುವಾಗಿದೆ.
ವಿರಾಟ್ ಕೊಹ್ಲಿ ಬರೋಬ್ಬರಿ 13 ವರ್ಷಗಳ ಬಳಿ ತಮ್ಮ ತವರು ದೆಹಲಿ ಪರ ರಣಜಿ ಆಡಲು ಸಿದ್ಧರಾಗಿದ್ದರು. ದೆಹಲಿ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಹೆಸರೂ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಅವರಿಗೆ ಕುತ್ತಿಗೆ ನೋವು ಶುರುವಾಗಿದೆ.
ಕಳೆದ ಕೆಲವು ದಿನಗಳಿಂದ ತಮ್ಮ ಹೊಸ ಬಂಗಲೆ ಗೃಹಪ್ರವೇಶ, ಮಡದಿ ಮಕ್ಕಳೊಂದಿಗೆ ದೇವಾಲಯಗಳಿಗೆ ಸುತ್ತು ಬರುತ್ತಿದ್ದ ಕೊಹ್ಲಿಗೆ ಈಗ ಕುತ್ತಿಗೆ ನೋವು ಶುರುವಾಗಿದೆಯಂತೆ. ಹೀಗಾಗಿ ಅವರೀಗ ದೆಹಲಿ ಪರ ರಣಜಿ ಆಡಲಿದ್ದಾರೋ ಎನ್ನುವುದು ಅನುಮಾನವಾಗಿದೆ.
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲಿನ ಬಳಿಕ ಎಲ್ಲರೂ ಕಡ್ಡಾಯವಾಗಿ ರಣಜಿ ಪಂದ್ಯ ಆಡಬೇಕೆಂದು ಬಿಸಿಸಿಐ ನಿಯಮ ತಂದಿತ್ತು. ಹೀಗಾಗಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲರೂ ತಮ್ಮ ತಮ್ಮ ತವರು ಪರ ರಣಜಿ ಆಡಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಕೊಹ್ಲಿ ಮಾತ್ರ ಇನ್ನೂ ಅಭ್ಯಾಸದಲ್ಲಿ ಪಾಲ್ಗೊಂಡಿಲ್ಲ. ಆದರೆ ತಂಡದಲ್ಲಿ ಅವರೂ ಸ್ಥಾನ ಪಡೆದಿರುವುದರಿಂದ ರಣಜಿ ಆಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅವರು ನೋವು ಉಪಶಮನವಾದರೆ ಮಾತ್ರ ಆಡುವ ಸಾಧ್ಯತೆಯಿದೆ. ಜನವರಿ 23 ರಿಂದ ಸೌರಾಷ್ಟ್ರ ಪರ ದೆಹಲಿ ರಣಜಿ ಪಂದ್ಯವಾಡಲಿದೆ.