ವಡೋದರ: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯ ಇಂದು ನಡೆಯಲಿದ್ದು, ಇದು ಕನ್ನಡಿಗರು ವರ್ಸಸ್ ಕರ್ನಾಟಕ ತೊರೆದ ಕನ್ನಡಿಗ ಕರುಣ್ ನಾಯರ್ ನಡುವಿನ ಕದನ ಎಂದರೂ ತಪ್ಪಾಗಲಾರದು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಐದನೇ ಬಾರಿಗೆ ಕರ್ನಾಟಕ ಫೈನಲ್ ಪ್ರವೇಶಿಸಿದೆ. ಇದು ಬಿಳಿ ಚೆಂಡಿನಲ್ಲಿ ಕರ್ನಾಟಕದ ಆಟಗಾರರ ಪಾರಮ್ಯಕ್ಕಿರುವ ಸಾಕ್ಷಿ. ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ಈ ಬಾರಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದೆ.
ಆದರೆ ಕರ್ನಾಟಕದ ಎದುರು ಇರುವುದು ವಿದರ್ಭ ತಂಡ. ವಿಶೇಷವೆಂದರೆ ವಿದರ್ಭಕ್ಕೂ ಕನ್ನಡಿಗನದ್ದೇ ನಾಯಕತ್ವ. ಒಂದು ಕಾಲದಲ್ಲಿ ಕರ್ನಾಟಕದ ಪರವೇ ಆಡುತ್ತಿದ್ದ ಕರುಣ್ ನಾಯರ್ ಈಗ ವಿದರ್ಭ ನಾಯಕ. ಕೇವಲ ನಾಯಕ ಮಾತ್ರವಲ್ಲ, ಈ ಬಾರಿ ಅವರು ಶತಕಗಳ ಮೇಲೆ ಶತಕ ಗಳಿಸುತ್ತಾ ಟೀಂ ಇಂಡಿಯಾ ಕದ ತಟ್ಟುವ ಮಟ್ಟಿಗೆ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.
ಕರುಣ್ ನಾಯರ್ ಈಗ ಒಂದು ಕಾಲದಲ್ಲಿ ತಾವು ಆಡಿದ ತಂಡದ ವಿರುದ್ಧವೇ ಗೆದ್ದು ಬೀಗುವ ಉತ್ಸಾಹದಲ್ಲಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದರೆ ರಾಷ್ಟ್ರೀಯ ತಂಡಕ್ಕೆ ಅವರಿಗೆ ಸದ್ಯದಲ್ಲೇ ಕರೆ ಬರಲಿದೆ. ಈ ಕಾರಣಕ್ಕೇ ಈ ಪಂದ್ಯವನ್ನು ಕನ್ನಡಿಗರು ಕುತೂಹಲದಿಂದ ಎದಿರು ನೋಡುತ್ತಿದ್ದಾರೆ. ವಡೋದರ ಮೈದಾನದಲ್ಲಿ ಇಂದು ಪಂದ್ಯ ನಡೆಯಲಿದೆ. ಮಧ್ಯಾಹ್ನ 1.30 ಕ್ಕೆ ಪಂದ್ಯ ಆರಂಭವಾಗಲಿದೆ.