ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದ ಟೀಂ ಇಂಡಿಯಾ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಗಾಯದ ಸ್ವರೂಪ ತೀವ್ರವಾಗಿದ್ದು, ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಾಗುವುದು ಅನುಮಾನ ಎಂಬ ಮಾಹಿತಿ ಹೊರಬಿದ್ದಿದೆ.
ಆಸ್ಟ್ರೇಲಿಯಾ ವಿರುದ್ಧ ಅದ್ಘುತ ಬೌಲಿಂಗ್ ಮಾಡಿ, ದಾಖಲೆಯ ವಿಕೆಟ್ ಪಡೆದು ಸರಣಿಯ ಆಟಗಾರ ಗೌರವಕ್ಕೆ ಪಾತ್ರವಾದ ಬೂಮ್ರಾ ಅವರ ಹೊರಬಿದ್ದರೆ ಭಾರತ ತಂಡಕ್ಕೆ ದೊಡ್ಡ ಆಘಾತವಾಗಲಿದೆ.
ಬೂಮ್ರಾ ಕೆಲವು ದಿನಗಳವರೆಗೆ ವಿಶ್ರಾಂತಿ ಪಡೆದು ಆ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಚೇತರಿಸಿಕೊಳ್ಳಲು ಕೆಲವು ದಿನಗಳ ಸಮಯಾವಕಾಶ ಬೇಕಾಗಿರುವುದರಿಂದ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು.
ಬೂಮ್ರಾ ಅವರ ಬೆನ್ನಿನಲ್ಲಿ ಊತ ಕಂಡುಬಂದಿದ್ದು ವೈದ್ಯರು ಸಂಪೂರ್ಣವಾಗಿ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅವರ ಗಾಯ ಗಂಭೀರವಾಗಿದ್ದು, ಮುಂದಿನ ವಾರ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಬೂಮ್ರಾ ಬೆನ್ನಿನ ಕೆಳಭಾಗದಲ್ಲಿ ಕಂಡುಬಂದಿರುವ ಊತ ಇನ್ನು ಕಡಿಮೆಯಾಗಿಲ್ಲ. ಅದು ಕಡಿಮೆಯಾದ ಬಳಿಕ ಅವರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ವರದಿ ಮಾಡಿದೆ.
ಬೂಮ್ರಾ ಬಹಳ ದಿನಗಳಿಂದ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಗಾಯದಿಂದಾಗಿ ಬೂಮ್ರಾ ಈ ಹಿಂದೆ ಭಾರತ ತಂಡದಿಂದ ಹೊರಗುಳಿಯಬೇಕಾಯಿತು. ಹೀಗಾಗಿಯೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಬಳಿಕ ಚೇತರಿಸಿಕೊಂಡು ತಂಡ ಸೇರಿಕೊಂಡಿದ್ದ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದರು. ಆದರೆ, ಸರಣಿಯ ಕೊನೆಯ ಟೆಸ್ಟ್ನಲ್ಲಿ ಬೆನ್ನು ನೋವಿಗೆ ಸಿಲುಕಿದ್ದರು.