ನ್ಯೂಯಾರ್ಕ್: ಟಿ20 ವಿಶ್ವಕಪ್ ಆಡಲು ನ್ಯೂಯಾರ್ಕ್ ನಲ್ಲಿರುವ ಟೀಂ ಇಂಡಿಯಾ ಆಟಗಾರರು ಈಗ ಗಾಯದ ಆತಂಕದಲ್ಲಿದ್ದಾರೆ. ನ್ಯೂಯಾರ್ಕ್ ಕಳಪೆ ಪಿಚ್ ನಿಂದಾಗಿ ಒಬ್ಬೊಬ್ಬರಾಗಿ ಗಾಯಗೊಳ್ಳುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ ಬಳಿಕ ಈಗ ವಿರಾಟ್ ಕೊಹ್ಲಿಯೂ ಆತಂಕದಲ್ಲಿದ್ದಾರೆ.
ಪಾಕಿಸ್ತಾನ ವಿರುದ್ಧ ನಾಳೆ ನಡೆಯಲಿರುವ ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ನೆಟ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ರೋಹಿತ್ ಹೆಬ್ಬೆರಳಿಗೆ ಗಾಯವಾಗಿದೆ. ತಕ್ಷಣವೇ ಅವರ ಹೆಬ್ಬೆರಳು ಊದಿಕೊಂಡಿದ್ದು ತಪಾಸಣೆಗೆ ತೆರಳಿದ್ದಾರೆ. ಅವರು ನಾಳೆ ಆಡುತ್ತಾರೋ ಇಲ್ಲವೋ ಎಂಬುದೇ ಇನ್ನೂ ಖಚಿತವಾಗಿಲ್ಲ.
ಇದರ ನಡುವೆ ವಿರಾಟ್ ಕೊಹ್ಲಿ ಕೂಡಾ ಗಾಯದ ಆತಂಕಕ್ಕೊಳಗಾಗಿದ್ದಾರೆ. ವಿರಾಟ್ ಕೊಹ್ಲಿ ಕೂಡಾ ರೋಹಿತ್ ರಂತೇ ಅಭ್ಯಾಸ ನಡೆಸುವಾಗ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಆದರೆ ರೋಹಿತ್ ರಷ್ಟು ಅವರಿಗೆ ಗಾಯವಾಗಿಲ್ಲ. ಹೀಗಾಗಿ ಸಮಾಧಾನಪಡಬಹುದಾಗಿದೆ.
ಆದರೆ ಭಾರತೀಯ ಆಟಗಾರರಿಗೆ ಆಗುತ್ತಿರುವ ಈ ಸಮಸ್ಯೆ ಬಗ್ಗೆ ಇದೀಗ ಬಿಸಿಸಿಐ ಅನಧಿಕೃತವಾಗಿ ಐಸಿಸಿಗೆ ದೂರು ನೀಡಿದೆ. ನ್ಯೂಯಾರ್ಕ್ ಪಿಚ್ ಬಗ್ಗೆ ಹೆಚ್ಚಿನ ತಂಡಗಳಿಂದ ಆಕ್ಷೇಪ ಕೇಳಿಬರುತ್ತಲೇ ಇದೆ. ಇದೀಗ ಬಿಸಿಸಿಐ ಕಳಪೆ ಪಿಚ್ ಬಗ್ಗೆ ಐಸಿಸಿಗೆ ದೂರು ನೀಡಿದೆ ಎಂದು ವರದಿಯಾಗಿದೆ.