Publish Date: Mon, 18 Jul 2022 (08:45 IST)
Updated Date: Mon, 18 Jul 2022 (09:27 IST)
ಮುಂಬೈ: ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿಯ ಫಾರ್ಮ್ ನ್ನೇ ಮುಂದಿಟ್ಟುಕೊಂಡು ಅವರನ್ನು ತಂಡದಿಂದ ಕಿತ್ತು ಹಾಕುವ ಬಗ್ಗೆ ಒತ್ತಾಯಗಳು ಕೇಳಿಬರುತ್ತಿವೆ. ಈ ಪರಿಸ್ಥಿತಿ ಈ ಹಿಂದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ಬಂದಿತ್ತು.
ಗ್ರೆಗ್ ಚಾಪೆಲ್ ಕೋಚ್ ಆಗಿದ್ದ ಕಾಲದಲ್ಲಿ ಗಂಗೂಲಿ ನಾಯಕತ್ವ ಕಳೆದುಕೊಂಡಿದ್ದರು. ಜೊತೆಗೆ ಅವರ ಫಾರ್ಮ್ ಕೂಡಾ ಕಳೆಗುಂದಿತ್ತು. ಈ ವೇಳೆ ಗಂಗೂಲಿಯನ್ನೂ ತಂಡದಿಂದ ಕಿತ್ತು ಹಾಕಲು ಅನೇಕರು ಒತ್ತಾಯಿಸಿದ್ದರು.
ಅಷ್ಟು ದಿನ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆ ಹೊತ್ತಿದ್ದ ಗಂಗೂಲಿಗೆ ಕೊನೆಗೆ ತಂಡದಿಂದಲೇ ಹೊರನಡೆಯುವ ಪರಿಸ್ಥಿತಿ ಬಂದಿತ್ತು. ಇದೀಗ ಕೊಹ್ಲಿಯೂ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಾಯಕನಾಗಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದಲ್ಲದೆ, ಜಾಗತಿಕ ಕ್ರಿಕೆಟ್ ನ ಶ್ರೇಷ್ಠ ಬ್ಯಾಟಿಗ ಎನಿಸಿಕೊಂಡಿದ್ದ ಕೊಹ್ಲಿಗೆ ಈಗ ತಂಡದಲ್ಲಿ ಅಳಿವು-ಉಳಿವಿನ ಸ್ಥಿತಿ ಎದುರಾಗಿದೆ.