Select Your Language

Notifications

webdunia
webdunia
webdunia
webdunia

ಮರೆಯಲಾಗದ ಶತಕದಿಂದ ಪಂದ್ಯ, ಹೃದಯ ಗೆದ್ದ ರಿಷಬ್ ಪಂತ್

ಮರೆಯಲಾಗದ ಶತಕದಿಂದ ಪಂದ್ಯ, ಹೃದಯ ಗೆದ್ದ ರಿಷಬ್ ಪಂತ್
ಮ್ಯಾಂಚೆಸ್ಟರ್ , ಸೋಮವಾರ, 18 ಜುಲೈ 2022 (08:15 IST)
ಮ್ಯಾಂಚೆಸ್ಟರ್: ಅಗತ್ಯಕ್ಕೆ ತಕ್ಕಂತೆ ಆಡಿ ಶತಕದ ಜೊತೆಗೆ ಕೊನೆಯವರೆಗೂ ಕ್ರೀಸ್ ನಲ್ಲಿದ್ದು ಭಾರತಕ್ಕೆ ಗೆಲುವು ಕೊಡಿಸಿದ ರಿಷಬ್ ಪಂತ್ ಈಗ ಟೀಂ ಇಂಡಿಯಾ ಪಾಲಿಗೆ ಹೀರೋ ಆಗಿದ್ದಾರೆ.

ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್-ಹಾರ್ದಿಕ್ ಪಾಂಡ್ಯರ ಸಮಯೋಚಿತ ಆಟದಿಂದಾಗಿ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ಗೆಲ್ಲಲು ಸಾಧ‍್ಯವಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 45.5 ಓವರ್ ಗಳಲ್ಲಿ 259 ರನ್ ಗಳಿಗೆ ಆಲೌಟ್ ಆಯಿತು. ಜೋಸ್ ಬಟ್ಲರ್ 60, ಮೊಯಿನ್ ಅಲಿ 34 ರನ್ ಗಳಿಸಿದರು. ಗಾಯದಿಂದಾಗಿ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಬದಲಿಗೆ ಕಣಕ್ಕಿಳಿದಿದ್ದ ಮೊಹಮ್ಮದ್ ಸಿರಾಜ್ 2 ವಿಕೆಟ್, ಹಾರ್ದಿಕ್ ಪಾಂಡ್ಯ 4 ವಿಕೆಟ್ ಕಬಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಎದುರಾಳಿಗಳಿಗೆ ನಿಯಂತ್ರಣ ಹೇರಿದ ಯಜುವೇಂದ್ರ ಚಾಹಲ್ 3 ವಿಕೆಟ್ ತಮ್ಮದಾಗಿಸಿಕೊಂಡರು. ಇನ್ನುಳಿದ ಒಂದು ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು.

ಈ ಮೊತ್ತ ಬೆನ್ನತ್ತದ ಭಾರತಕ್ಕೆ ಶಿಖರ್ ಧವನ್ ಆರಂಭದಲ್ಲೇ ಕೈಕೊಟ್ಟರು. ಧವನ್ 1 ರನ್ ಗಳಿಸಿ ಔಟಾದರೆ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ ಕೊಂಚ ಸೆಟ್ ಆದಂತೆ ಅನಿಸಿದರೂ ತಲಾ 17 ರನ್ ಗಳಿಸಿ ಇಬ್ಬರೂ ಪೆವಿಲಿಯನ್ ಸೇರಿಕೊಂಡರು. ಸೂರ್ಯಕುಮಾರ್ ಯಾದವ್ ಕೂಡಾ 16 ರನ್ ಗಳಿಸಿ ಔಟಾದಾಗ ಭಾರತಕ್ಕೆ ಸೋಲಿನ ಭೀತಿ ಎದುರಾಗಿತ್ತು. ಆದರೆ ಈ ಹಂತದಲ್ಲಿ ಜೊತೆಯಾದ ರಿಷಬ್ ಪಂತ್-ಹಾರ್ದಿಕ್ ಪಾಂಡ್ಯ ಜೋಡಿ ಶತಕದ ಜೊತೆಯಾಟವಾಡಿ ಭಾರತದ ಗೆಲುವಿಗೆ ಬುನಾದಿ ಹಾಕಿಕೊಟ್ಟರು.

ಅಚ್ಚರಿಯೆಂದರೆ ಹೊಡೆಬಡಿಯ ಆಟವಾಡುವ ರಿಷಬ್ 90 ರ ಗಡಿಯವರೆಗೂ ಕ್ರೀಸ್ ಗೆ ಅಂಟಿಕೊಂಡು ಜವಾಬ್ಧಾರಿಯುತ ಆಟವಾಡಿದರು. ಆದರೆ ಹಾರ್ದಿಕ್ ತಮ್ಮ ಎಂದಿನ ಹೊಡೆಬಡಿಯ ಶೈಲಿಯ ಮೂಲಕ ಮಹತ್ವದ 71 ರನ್ ಕೊಡುಗೆ ನೀಡಿದರು. ಪಾಂಡ್ಯ ಔಟಾದ ಬಳಿಕ ಗೇರ್ ಬದಲಾಯಿಸಿದ ರಿಷಬ್ ಪಂತ್ ಬೌಂಡರಿ, ಸಿಕ್ಸರ್ ಮೂಲಕ ಭಾರತಕ್ಕೆ 42.1 ಓವರ್ ಗಳಲ್ಲಿ ಗೆಲುವು ಕೊಡಿಸಿದರು. ಅಂತಿಮವಾಗಿ ಭಾರತ 5 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು.  ರಿಷಬ್ ಅಜೇಯ 125 ರನ್ ಗಳಿಸಿದರು. ಈ ಇನಿಂಗ್ಸ್ ಮೂಲಕ ರಿಷಬ್ ಪಂದ್ಯ ಗೆಲ್ಲಿಸಿಕೊಟ್ಟಿದ್ದಲ್ಲದೆ, ಅಭಿಮಾನಿಗಳ ಹೃದಯವನ್ನೂ ಗೆದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಣಾಯಕ ಪಂದ್ಯಕ್ಕೆ ಸಜ್ಜಾದ ಭಾರತ-ಇಂಗ್ಲೆಂಡ್