ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬವನ್ನು ಸರಿಯಾಗಿಯೇ ಆಚರಿಸಿಕೊಂಡಿದ್ದಾರೆ. ಇಂದು ಭಾರತೀಯ ಬ್ಯಾಟಿಂಗ್ ನ ಸಂಪೂರ್ಣ ಹೊಣೆಯನ್ನು ಹೆಗಲಿಗೇರಿಸಿಕೊಂಡು ಶತಕದ ಇನಿಂಗ್ಸ್ ಆಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್-ಗಿಲ್ ಜೋಡಿ ಬಿರುಸಿನ ಆಟಕ್ಕೆ ಕೈ ಹಾಕಿತು. ರೋಹಿತ್ ಕೇವಲ 24 ಎಸೆತಗಳಲ್ಲಿ 40 ರನ್ ಚಚ್ಚಿದರೆ ಗಿಲ್ 23 ರನ್ ಗಳಿಸಿದರು. ಈ ಇಬ್ಬರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ 5 ಓವರ್ ಗಳಲ್ಲೇ 60 ರನ್ ದಾಟಿತ್ತು.
ಆದರೆ ಇಬ್ಬರೂ ಔಟಾಗುತ್ತಿದ್ದಂತೇ ಕೊಹ್ಲಿ-ಶ್ರೇಯಸ್ ಜೋಡಿ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟುವ ಕಡೆಗೆ ಗಮನ ಹರಿಸಿದರು. ಇದಕ್ಕೆ ಪಿಚ್ ಕೊಂಚ ಸ್ಪಿನ್ ಸ್ನೇಹಿಯಾಗಿದ್ದೂ ಕಾರಣ. ಶತಕದ ಜೊತೆಯಾಟದ ಬಳಿಕ ಶ್ರೇಯಸ್ 87 ಎಸೆತಗಳಿಂದ 77 ರನ್ ಗಳಿಸಿ ಔಟಾದರೆ ನಂತರ ಬಂದ ಕೆಎಲ್ ರಾಹುಲ್ ಕೇವಲ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಔಟಾದ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಬಿರುಸಿನ ಆಟಕ್ಕೆ ಕೈ ಹಾಕಿದರೂ ದುರದೃಷ್ಟವಶಾತ್ 13 ಎಸೆತಗಳಲ್ಲಿ 22 ರನ್ ಗಳಿಸಿದ್ದಾಗ ಗ್ಲೌಸ್ ಗೆ ತಗುಲಿದ ಬಾಲ್ ಕೀಪರ್ ಕೈ ಸೇರಿ ಔಟಾದರು. ಜಡೇಜಾ 15 ಎಸೆತಗಳಲ್ಲಿ 29 ರನ್ ಗಳಿಸಿದರು.
ಆದರೆ ಆರನೇ ಓವರ್ ನಲ್ಲಿ ಬ್ಯಾಟಿಂಗ್ ಗೆ ಬಂದ ವಿರಾಟ್ ಕೊಹ್ಲಿ 50 ಓವರ್ ಗಳವರೆಗೆ ಅಜೇಯವಾಗಿ ಕ್ರೀಸ್ ನಲ್ಲಿದ್ದು ಭಾರತ ಇನಿಂಗ್ಸ್ ಜವಾಬ್ಧಾರಿಯನ್ನು ಸಂಪೂರ್ಣ ತಮ್ಮ ಹೆಗಲಿಗೇರಿಸಿಕೊಂಡರು. ಕೊಹ್ಲಿ ಒಟ್ಟು 121 ಎಸೆತಗಳನ್ನು ಎದುರಿಸಿ ಅಜೇಯ 101 ರನ್ ಗಳಿಸಿದರು. ಈ ಅದ್ಭುತ ಶತಕ ಅವರ ಹುಟ್ಟುಹಬ್ಬದ ದಿನವೇ ಬಂದಿದ್ದು ವಿಶೇಷ. ಜೊತೆಗೆ ಇದು ಏಕದಿನದಲ್ಲಿ ಇದು 49 ನೇ ಶತಕವಾಗಿದ್ದು, ಈ ಮೂಲಕ ಅತ್ಯಧಿಕ ಏಕದಿನ ಶತಕ ಸಿಡಿಸಿದ ಸಚಿನ್ ದಾಖಲೆಯನ್ನು ಸರಿಗಟ್ಟಿದರು.