ದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನ ಯಶಸ್ವಿ ಜೈಸ್ವಾಲ್ ದ್ವಿಶತಕ ಗಳಿಸಬೇಕಿತ್ತು. ಆದರೆ ಅವರ ದ್ವಿಶತಕ ತಪ್ಪಲು ಶುಭಮನ್ ಗಿಲ್ ಮಾಡಿದ ತಪ್ಪೇ ಕಾರಣವಾಯಿತು. ಇದು ಅಭಿಮಾನಿಗಳನ್ನು ಕೆರಳಿಸಿದ್ದು ಕೊಹ್ಲಿ ನೋಡಿ ಕಲಿಯಿರಿ ಎಂದಿದ್ದಾರೆ.
ನಿನ್ನೆ 173 ರನ್ ಗಳೊಂದಿಗೆ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಯಶಸ್ವಿ ಜೈಸ್ವಾಲ್ ಇಂದು ಮತ್ತೆ ತಮ್ಮ ಖಾತೆಗೆ 2 ರನ್ ಸೇರಿಸಿದ್ದಾಗ ಗಿಲ್ ಮಾಡಿದ ಎಡವಟ್ಟಿನಿಂದ ರನೌಟ್ ಆದರು. ಇದರೊಂದಿಗೆ ಅವರಿಗೆ ಅರ್ಹವಾಗಿದ್ದ ದ್ವಿಶತಕ ಕೈ ತಪ್ಪಿ ಹೋಯಿತು. ಇದಕ್ಕೆ ಅಭಿಮಾನಿಗಳು ಶುಭಮನ್ ಗಿಲ್ ಮೇಲೆ ಭಾರೀ ಸಿಟ್ಟಾಗಿದ್ದಾರೆ.
ಜೇಡನ್ ಸೀಲ್ಸ್ ಬೌಲಿಂಗ್ ನಲ್ಲಿ ಚೆಂಡು ಹೊಡೆದ ಜೈಸ್ವಾಲ್ ಓಡಲು ತಯಾರಾಗಿದ್ದರು. ಆದರೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಗಿಲ್ ಇನ್ನೊಂದು ತುದಿಯಲ್ಲಿದ್ದ ಜೈಸ್ವಾಲ್ ಕಡೆಗೆ ನೋಡದೇ ಚೆಂಡು ಫೀಲ್ಡ್ ಮಾಡುತ್ತಿದ್ದ ಫೀಲ್ಡರ್ ಕಡೆಗೆ ನೋಡುತ್ತಾ ನಿಂತು ಬಿಟ್ಟರು. ಚೆಂಡು ಹತ್ತಿರದಲ್ಲೇ ಫೀಲ್ಡ್ ಆಗಿದೆ ಎಂದು ತಿಳಿದು ಜೈಸ್ವಾಲ್ ಕಡೆಗೆ ತಿರುಗಿಯೂ ನೋಡದೇ ಎರಡು ಹೆಜ್ಜೆ ಮುಂದೆ ಹೋದ ಗಿಲ್ ಮರಳಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತರು.
ಆದರೆ ಅಷ್ಟರಲ್ಲಿ ಜೈಸ್ವಾಲ್ ಅರ್ಧದಷ್ಟು ದಾರಿ ಬಂದಿದ್ದರು. ಆದರೆ ಅವರು ಮರಳಿ ಕ್ರೀಸ್ ತಲುಪುವಷ್ಟರಲ್ಲಿ ವಿಂಡೀಸ್ ಫೀಲ್ಡರ್ ಗಳು ಬೇಲ್ಸ್ ಎಗರಿಸಿದ್ದರು. ಇದರಿಂದ ಜೈಸ್ವಾಲ್ ಔಟಾದರು. ಬಹುಶಃ ಗಿಲ್ ಫೀಲ್ಡರ್ ಕಡೆಗೆ ನೋಡುತ್ತಾ ನಿಲ್ಲುವುದು ಬಿಟ್ಟು ಜೈಸ್ವಾಲ್ ಕಡೆಗೆ ಒಮ್ಮೆ ತಿರುಗಿದ್ದರೆ ವಿಕೆಟ್ ಉಳಿಸಬಹುದಿತ್ತು. ಅಥವಾ ನಿನ್ನೆ ದಿನವಿಡೀ ಕ್ರೀಸ್ ನಲ್ಲಿದ್ದು ಬೆವರಿಳಿಸಿದ ಜೈಸ್ವಾಲ್ ವಿಕೆಟ್ ಉಳಿಸಲು ತಾವೇ ರಿಸ್ಕ್ ತೆಗೆದುಕೊಳ್ಳಬಹುದಿತ್ತು. ಆದರೆ ಅದನ್ನು ಮಾಡದೇ ಗಿಲ್ ಸ್ವಾರ್ಥಿಯಾದರು ಎಂಬುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ಕಾರಣಕ್ಕೆ ಹಿಂದೊಮ್ಮೆ ಇಂತಹದ್ದೇ ಸಂದರ್ಭದಲ್ಲಿ ರೋಹಿತ್-ಕೊಹ್ಲಿ ಏನು ಮಾಡಿದ್ದರು ಎಂಬ ವಿಡಿಯೋವೊಂದನ್ನು ನೆಟ್ಟಿಗರು ವೈರಲ್ ಮಾಡಿದ್ದಾರೆ. ಅಲ್ಲಿ ಗಿಲ್ ಸ್ಥಾನದಲ್ಲಿ ಕೊಹ್ಲಿ ಇದ್ದರು. ಆದರೆ ಅಂದು ಕೊಹ್ಲಿ ತಮ್ಮ ಸ್ವಾರ್ಥ ಯೋಚಿಸದೇ ರೋಹಿತ್ ವಿಕೆಟ್ ಉಳಿಸಲು ತಾವು ಓಡಿದ್ದರು. ಅದೃಷ್ಟವಶಾತ್ ಇಬ್ಬರೂ ರನೌಟ್ ಆಗಿರಲಿಲ್ಲ.
ಇನ್ನು, ಪಂದ್ಯದ ವಿಚಾರಕ್ಕೆ ಬರುವುದಾದರೆ ಭಾರತ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 509 ರನ್ ಗಳಿಸಿದೆ. ನಾಯಕ ಗಿಲ್ 122, ಧ್ರುವ ಜ್ಯುರೆಲ್ 42 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.