ಬೆಂಗಳೂರು: ಕೆಎಲ್ ರಾಹುಲ್ ವೈಫಲ್ಯಕ್ಕೊಳಗಾಗಿದ್ದಾಗ ತೀವ್ರ ಟೀಕೆ ಮಾಡಿದ್ದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಈಗ ನಟ ಸುನಿಲ್ ಶೆಟ್ಟಿ ಜೊತೆ ಟೆಂಪಲ್ ರನ್ ನಡೆಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದ್ದಾರೆ.
ನ್ಯೂಜೆರ್ಸಿಯಲ್ಲಿರುವ ಸ್ವಾಮಿ ನಾರಾಯಣ ದೇವಾಲಯಕ್ಕೆ ಅಣ್ಣನ ಜೊತೆ ಭೇಟಿ ನೀಡಿದ್ದೇನೆ. ಎಲ್ಲಾ ಭಾರತ ವಾಸಿಗಳು ಮತ್ತು ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಂತೆ ಪ್ರಾರ್ಥನೆ ಮಾಡಿದ್ದೇನೆ. ವಿಶೇಷವಾಗಿ ಕೆಎಲ್ ರಾಹುಲ್ ಮೈದಾನದ ನಾಲ್ಕೂ ಮೂಲೆಗೂ ಚೆಂಡು ಅಟ್ಟಿ ಅತ್ಯುತ್ತಮ ಪ್ರದರ್ಶನ ನೀಡಿ ನನ್ನಂತಹ ಟೀಕಾಕಾರರ ಬಾಯಿ ಮುಚ್ಚಿಸಲಿ ಎಂದು ಸೀಕ್ರೆಟ್ ಆಗಿ ಪ್ರಾರ್ಥಿಸಿದ್ದೇನೆ ಎಂದು ವೆಂಕಿ ಸೋಷಿಯಲ್ ಮೀಡಿಯಾದಲ್ಲಿ ಕೆಎಲ್ ರಾಹುಲ್ ಮಾವ ಸುನಿಲ್ ಶೆಟ್ಟಿ ಜೊತೆಗಿರುವ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದರು.
ಅವರ ಈ ಫೋಟೋಗೆ ನಾನಾ ರೀತಿಯ ಕಾಮೆಂಟ್ ಗಳು ಬಂದಿದೆ. ಅಣ್ಣ ಪಕ್ಕದಲ್ಲೇ ಹೆಗಲ ಮೇಲೆ ಕೈ ಹಾಕಿ ನಿಂತಿದ್ದಕ್ಕೇ ಈ ಸಾಲು ಬರೆದಿರಾ ಎಂದು ಕೆಲವರು ತಮಾಷೆ ಮಾಡಿದ್ದಾರೆ ಮತ್ತೆ ಕೆಲವರು ಈ ಗೆಳೆತನ ಯಾವಾಗ ಶುರುವಾಯ್ತು ಎಂದು ವ್ಯಂಗ್ಯ ಮಾಡಿದ್ದಾರೆ.