Publish Date: Sat, 17 Feb 2024 (09:21 IST)
Updated Date: Sat, 17 Feb 2024 (09:26 IST)
ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನವಾಗಿದ್ದು ಮನೆಗೆಲಸದವರ ವಿರುದ್ಧ ದೂರು ದಾಖಲಾಗಿದೆ.
ಪಂಚಕುದಲ್ಲಿರುವ ಯುವರಾಜ್ ಸಿಂಗ್ ತಾಯಿ ಶಬ್ನಮ್ ಸಿಂಗ್ ವಾಸಿಸುವ ಮನೆಯಲ್ಲಿ ಕಳ್ಳತನವಾಗಿದೆ. ಈ ಘಟನೆ ನಡೆದು ಆರು ತಿಂಗಳಾಗಿವೆ. ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ 75 ಸಾವಿರ ರೂ. ಕಳ್ಳತನವಾಗಿದೆ ಎಂದು ಶಬ್ನಮ್ ಸಿಂಗ್ ದೂರು ನೀಡಿದ್ದಾರೆ.
ಯುವರಾಜ್ ಸಿಂಗ್ ತಾಯಿಗೆ ಸಹಾಯಕರಾಗಿ ಇಬ್ಬರು ನೌಕರರು ಮನೆಯಲ್ಲಿದ್ದವರು. ಇವರೇ ಕೃತ್ಯವೆಸಗಿರಬಹುದು ಎಂದು ಸಂಶಯಿಸಲಾಗಿದೆ. ಈ ನೌಕರರಲ್ಲಿ ಒಬ್ಬರು ಲಲಿತಾ ದೇವಿ ಎಂಬ ಮಹಿಳೆ ಮತ್ತು ಇನ್ನೊಬ್ಬಾತ ಶೈಲೇಂದ್ರ ದಾಸ್ ಎಂಬಾತನಾಗಿದ್ದ. ಕೆಲವು ದಿನಗಳಿಂದ ಶಬ್ನಮ್ ಸಿಂಗ್ ಗುರ್ಗಾಂವ್ ನಲ್ಲಿರುವ ಇನ್ನೊಂದು ಮನೆಯಲ್ಲಿ ತಂಗಿದ್ದರು. ಈ ವೇಳೆ ಕಳ್ಳತನ ನಡೆದಿದೆ ಎನ್ನಲಾಗಿದೆ.
ಪಂಚಕುಲದಲ್ಲಿರುವ ಮನೆಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿರುವ ಎಲ್ಲಾ ನೌಕರರನ್ನು ವಿಚಾರಣೆಗೊಳಪಡಿಸಿದರೂ ಯಾರು ಎಂದು ಪತ್ತೆಯಾಗಿರಲಿಲ್ಲ. ಆದರೆ ದೀಪಾವಳಿ ವೇಳೆ ಶಂಕಿತ ಇಬ್ಬರು ನೌಕರರು ಮನೆ ಬಿಟ್ಟು ಓಡಿ ಹೋಗಿದ್ದಾರೆ. ಹೀಗಾಗಿ ಅವರ ಮೇಲೆ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಡುತ್ತಿದ್ದಾರೆ.