ಮುಂಬೈ: ಟೀಂ ಇಂಡಿಯಾ ಕೋಚ್, ಮಾಜಿ ಸಂಸದ ಗೌತಮ ಗಂಭೀರ್ ಗೆ ಐಸಿಸ್ ಕಾಶ್ಮೀರ ಖಾತೆಯಿಂದ ಕೊಲೆ ಬೆದರಿಕೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಟೀಂ ಇಂಡಿಯಾ ಕೋಚ್ ಆಗಿರುವ ಗೌತಮ್ ಗಂಭೀರ್ ಈ ಹಿಂದೆ ಬಿಜೆಪಿ ಸಂಸದರಾಗಿದ್ದಾಗಲೂ ಅವರಿಗೆ ಇದೇ ಖಾತೆಯಿಂದ ಕೊಲೆ ಬೆದರಿಕೆ ಬಂದಿತ್ತು. ಇದೀಗ ಎರಡನೇ ಬಾರಿಗೆ ಕೊಲೆ ಬೆದರಿಕೆ ಬಂದಿದೆ. ಈಮೇಲ್ ಮೂಲಕ ಐ ಕಿಲ್ ಯೂ ಎಂದು ಮೆಸೇಜ್ ಮಾಡಲಾಗಿದೆ.
ಇದರ ಬೆನ್ನಲ್ಲೇ ಅಲರ್ಟ್ ಆದ ಗೌತಮ್ ಗಂಭೀರ್ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೊನ್ನೆಯಷ್ಟೇ ಕಾಶ್ಮೀರದಲ್ಲಿ ಉಗ್ರ ದಾಳಿಯ ಬೆನ್ನಲ್ಲೇ ಗಂಭೀರ್ ಗೆ ಈ ಬೆದರಿಕೆ ಬಂದಿರುವುದು ಗಮನಿಸಬೇಕಾದ ಅಂಶವಾಗಿದೆ.
ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ತಕ್ಷಣ ಗೌತಮ್ ಗಂಭೀರ್ ಟ್ವೀಟ್ ಮಾಡಿ ಘಟನೆಯನ್ನು ಖಂಡಿಸಿದ್ದರು. ಉಗ್ರರನ್ನು ಸದೆಬಡಿಯಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಬೆದರಿಕೆ ಈಮೇಲ್ ಬಂದಿದೆ.