ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಕೇವಲ 62 ರನ್ ಗಳಿಗೆ ಆಲೌಟ್ ಅಗಿದೆ.
ಇದರೊಂದಿಗೆ ಭಾರತದ ಮೊದಲ ಇನಿಂಗ್ಸ್ ಮೊತ್ತದಿಂದ 263 ರನ್ ಗಳ ಹಿನ್ನಡೆ ಅನುಭವಿಸಿದೆ. ವಿಶೇಷವೆಂದರೆ ಕಿವೀಸ್ ಇನಿಂಗ್ಸ್ ಕೇವಲ 2 ಗಂಟೆಯೊಳಗೇ ಸಮಾಪ್ತಿಯಾಗಿದೆ. ಇದಕ್ಕೂ ಮೊದಲು ಕಿವೀಸ್ ಬೌಲರ್ ಅಜಾಜ್ ಪಟೇಲ್ ಟೀಂ ಇಂಡಿಯಾದ ಎಲ್ಲಾ 10 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದರು. ಅದಾದ ಬಳಿಕ ಭಾರತೀಯ ಬೌಲರ್ ಗಳ ಪಾರಮ್ಯವಾಗಿತ್ತು. ಇದು ಭಾರತದ ನೆಲದಲ್ಲಿ ನ್ಯೂಜಿಲೆಂಡ್ ನ ಕನಿಷ್ಠ ಮೊತ್ತವಾಗಿದೆ.
ನ್ಯೂಜಿಲೆಂಡ್ ಪರ ಆರಂಭಿಕ ಲಾಥಮ್ 10 ಮತ್ತು ಜೆಮಿಸನ್ 17 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟರ್ ಗಳದ್ದು ಕೇವಲ ಏಕಂಕಿಯ ಕೊಡುಗೆಯಾಗಿತ್ತು. ಭಾರತದ ಪರ ರವಿಚಂದ್ರನ್ ಅಶ್ವಿನ್ 4, ಮೊಹಮ್ಮದ್ ಸಿರಾಜ್ 3, ಅಕ್ಸರ್ ಪಟೇಲ್ 2 ಮತ್ತು ಜಯಂತ್ ಯಾದವ್ 1 ವಿಕೆಟ್ ಪಡೆದರು. ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 20 ರನ್ ಗಳಿಸಿದೆ. ಆರಂಭಿಕರಾಗಿ ಶುಬ್ನಂ ಗಿಲ್ ಬದಲಿಗೆ ಬಡ್ತಿ ಪಡೆದು ಕಣಕ್ಕಿಳಿದಿರುವ ಚೇತೇಶ್ವರ ಪೂಜಾರ 15 ಮತ್ತು ಮಯಾಂಕ್ ಅಗರ್ವಾಲ್ 5 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.