ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಲು ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಡವಾಗಿ ನ್ಯೂಯಾರ್ಕ್ ನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ನಾಲ್ಕು ದಿನಗಳ ಮುಂಚಿತವಾಗಿಯೇ ನ್ಯೂಯಾರ್ಕ್ ಗೆ ತೆರಳಿತ್ತು. ಆದರೆ ಐಪಿಎಲ್ ಮುಗಿದ ಬಳಿಕ ವಿಶ್ರಾಂತಿ ಬಯಸಿದ್ದ ವಿರಾಟ್ ಕೊಹ್ಲಿ ಕೊನೆಯವರಾಗಿ ತಡವಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಮೊನ್ನೆಯಷ್ಟೇ ಅವರು ಮುಂಬೈ ವಿಮಾನ ನಿಲ್ದಾಣದ ಮೂಲಕ ನ್ಯೂಯಾರ್ಕ್ ಗೆ ಪ್ರಯಾಣ ಬೆಳೆಸಿದರು.
ವಿರಾಟ್ ಕೊಹ್ಲಿ ಇದೀಗ ನ್ಯೂಯಾರ್ಕ್ ನಲ್ಲಿರುವ ತಂಡದ ಹೋಟೆಲ್ ಗೆ ಬಂದು ಸೇರಿದ್ದಾರೆ. ಆದರೆ ಸತತ 16 ಗಂಟೆಗಳ ಪ್ರಯಾಣದಿಂದ ಸುಸ್ತಾಗಿರುವ ಕಾರಣಕ್ಕೆ ಹೋಟೆಲ್ ರೂಂನಲ್ಲಿಯೇ ಉಳಿದುಕೊಂಡಿದ್ದಾರೆ.
ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವೆ ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ಅಭ್ಯಾಸ ಪಂದ್ಯ ನಡೆಯಲಿದೆ. ಇದು ಭಾರತಕ್ಕೆ ಮೊದಲ ಅಭ್ಯಾಸ ಪಂದ್ಯವಾಗಿದೆ. ಈ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗದೇ ಕೊಹ್ಲಿ ಹೋಟೆಲ್ ರೂಂನಲ್ಲಿಯೇ ಉಳಿದುಕೊಂಡು ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಜೂನ್ 5 ರಂದು ಭಾರತ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ.