ನ್ಯೂಯಾರ್ಕ್: ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೊನೆಯ ಟಿ20 ವಿಶ್ವಕಪ್ ನಲ್ಲಿ ಆಡಲು ಸಜ್ಜಾಗಿದ್ದಾರೆ.
ಜೂನ್ 2 ರಿಂದ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಭಾರತ ತಂಡ ಜೂನ್ 4 ರಂದು ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.
ವಿರಾಟ್ ಕೊಹ್ಲಿ ಮಾತ್ರ ಇನ್ನೂ ತಂಡ ಕೂಡಿಕೊಂಡಿಲ್ಲ. ಉಳಿದೆಲ್ಲಾ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಈ ಟಿ20 ವಿಶ್ವಕಪ್ ಕೊಹ್ಲಿ ಮತ್ತು ರೋಹಿತ್ ಗೆ ವಿಶೇಷವಾಗಿದೆ. ಯಾಕೆಂದರೆ ಇದು ಅವರ ವೃತ್ತಿ ಜೀವನದ ಕೊನೆಯ ಟಿ20 ವಿಶ್ವಕಪ್ ಪಂದ್ಯಾವಳಿಯಾಗಲಿದೆ.
ಈ ಟಿ20 ವಿಶ್ವಕಪ್ ಗೇ ಆಯ್ಕೆಗಾರರು ಈ ಇಬ್ಬರು ದಿಗ್ಗಜ ಆಟಗಾರರನ್ನು ಅಳೆದು ತೂಗಿ ಆಯ್ಕೆ ಮಾಡಿತ್ತು. ರೋಹಿತ್ ಗೆ ಈಗ 37 ವರ್ಷ, ವಿರಾಟ್ ಕೊಹ್ಲಿಗೆ 36 ವರ್ಷ. ಇಬ್ಬರೂ ವೃತ್ತಿ ಜೀವನದ ಕೊನೆಯ ಅವಧಿಯಲ್ಲಿದ್ದಾರೆ.
ಮುಂದೆ ಯುವಕರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಿಂದ ರೋಹಿತ್, ಕೊಹ್ಲಿ ಅನಿವಾರ್ಯವಾಗಿ ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾಗಬಹುದು. ಮುಂದಿನ ಟಿ20 ವಿಶ್ವಕಪ್ 2026 ರಲ್ಲಿ ನಡೆಯಲಿದೆ. ಆ ವೇಳೆಗೆ ಇಬ್ಬರೂ ಟಿ20 ಕ್ರಿಕೆಟ್ ನಿಂದ ನಿವೃತ್ತಿ ಹೇಳಬಹುದು. ಹೀಗಾಗಿ ಟೀಂ ಇಂಡಿಯಾದ ಈ ಇಬ್ಬರು ದಿಗ್ಗಜರಿಗೆ ಇದು ಕೊನೆಯ ಟಿ20 ವಿಶ್ವಕಪ್ ಆಗಿದೆ. ಟಿ20 ವಿಶ್ವಕಪ್ ಗೆಲುವಿನ ತಂಡದ ಭಾಗವಾಗಲು ಇಬ್ಬರಿಗೂ ಕೊನೆಯ ಅವಕಾಶವಾಗಲಿದೆ.