ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳು ಎಂದು ಎಲ್ಲರಿಗೂ ಗೊತ್ತು. ಇದೀಗ ಕೆಎಲ್ ರಾಹುಲ್ ಗೆ ಮಾವ ಸುನಿಲ್ ಶೆಟ್ಟಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕೆಎಲ್ ರಾಹುಲ್ ಅಳಿಯನಾದರೂ ಸುನಿಲ್ ಶೆಟ್ಟಿ ಜೊತೆಗೆ ತಂದೆ-ಮಗನಷ್ಟೇ ಉತ್ತಮ ಬಾಂಧವ್ಯವಿದೆ. ಸುನಿಲ್ ಶೆಟ್ಟಿ ಕೂಡಾ ರಾಹುಲ್ ನನ್ನ ಇನ್ನೊಬ್ಬ ಮಗ ಎಂದೇ ಹೇಳುತ್ತಾರೆ. ಆದರೆ ಇದೀಗ ಸುನಿಲ್ ಶೆಟ್ಟಿ ತಮ್ಮ ವರಸೆ ಬದಲಿಸಿದ್ದು, ಸದ್ಯಕ್ಕೆ ನೀನು ನನ್ನ ಮಗನಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಅಷ್ಟಕ್ಕೂ ಈ ರೀತಿ ಎಚ್ಚರಿಕೆ ಕೊಟ್ಟಿದ್ದು ಗಂಭೀರವಾಗಿ ಅಲ್ಲ! ಜಾಹೀರಾತೊಂದಕ್ಕಾಗಿ. ಐಪಿಎಲ್ ನಲ್ಲಿ ಸುನಿಲ್ ಶೆಟ್ಟಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಅಳಿಯ ರಾಹುಲ್ ಲಕ್ನೋ ತಂಡದ ನಾಯಕ. ಹೀಗಾಗಿ ಮುಂಬೈ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ತಮಾಷೆಯ ಜಾಹೀರಾತೊಂದನ್ನು ಹೊರತರಲಾಗಿದೆ.
ಈ ಜಾಹೀರಾತಿನಲ್ಲಿ ರೆಸ್ಟೋರೆಂಟ್ ನಲ್ಲಿ ಸುನಿಲ್ ಶೆಟ್ಟಿ ಮತ್ತು ರೋಹಿತ್ ಜೊತೆಯಾಗಿ ಕುಳಿತಿರುವಾಗ ಲಕ್ನೋ ಜೆರ್ಸಿಯಲ್ಲಿ ಬರುವ ರಾಹುಲ್ ಪಪ್ಪಾ ಎನ್ನುತ್ತಾರೆ. ಆಗ ಸುನಿಲ್ ಈ ಐಪಿಎಲ್ ಮುಗಿಯುವರೆಗೂ ನೀನು ನನ್ನ ಮಗನಲ್ಲ. ನನಗೆ ಶರ್ಮಾಜೀಯೇ ಮಗ ಎಂದು ರೋಹಿತ್ ರನ್ನು ತೋರಿಸುತ್ತಾರೆ. ಅಗ ರಾಹುಲ್ ಸಪ್ಪೆ ಮುಖ ಹಾಕಿಕೊಂಡು ಜಾಗ ಖಾಲಿ ಮಾಡುತ್ತಾರೆ. ಈ ವಿಡಿಯೋ ಈಗ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.