ಉಜ್ಜೈನಿ: ಟೀಂ ಇಂಡಿಯಾ ಕ್ರಿಕೆಟಿಗ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಇಂದು ಬೆಳ್ಳಂ ಬೆಳಿಗ್ಗೆ ಉಜ್ಜೈನಿಯ ಮಹಾಕಾಳೇಶ್ವರನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಉಜ್ಜೈನಿಗೆ ರಾಹುಲ್ ಈ ಹಿಂದೆಯೂ ಹಲವು ಬಾರಿ ಭೇಟಿ ನೀಡಿದ್ದರು. ಈ ಮೊದಲು ಪತ್ನಿ ಅಥಿಯಾ ಜೊತೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೀಗ ಐಪಿಎಲ್ 2024 ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ತಮ್ಮ ಪೋಷಕರ ಜೊತೆ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ.
ಆದರೆ ಈ ಬಾರಿ ಪತ್ನಿ ಅಥಿಯಾ ಜೊತೆಗಿರಲಿಲ್ಲ. ಬದಲಾಗಿ ತಂದೆ-ತಾಯಿಯ ಜೊತೆಗೆ ಬಂದು ಅಭಿಷೇಕ ಪೂಜೆ ನೆರವೇರಿಸಿದ್ದಾರೆ. ಬಳಿಕ ಅವರಿಗೆ ಅರ್ಚಕರು ವಿಶೇಷವಾಗಿ ತಿಲಕವಿಟ್ಟು ವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ರಾಹುಲ್ ದೇವಸ್ಥಾನಕ್ಕೆ ಬಂದಿದ್ದರು.
ಗಾಯಗೊಂಡಿದ್ದ ಕೆಎಲ್ ರಾಹುಲ್ ಈಗಷ್ಟೇ ಫಿಟ್ನೆಸ್ ಸರ್ಟಿಫಿಕೇಟ್ ಪಡೆದಿದ್ದು, ಐಪಿಎಲ್ ಆಡಲು ಹಸಿರು ನಿಶಾನೆ ಪಡೆದಿದ್ದಾರೆ. ಆದರೆ ಈ ಬಾರಿ ಅವರು ಕೀಪಿಂಗ್ ಮಾಡುವುದು ಅನುಮಾನವಾಗಿದೆ. ಮಾರ್ಚ್ 24 ರಂದು ಲಕ್ನೋ ತನ್ನ ಮೊದಲ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.