ಕೇಪ್ ಟೌನ್: ಮಹಿಳಾ ಟಿ20 ವಿಶ್ವಕಪ್ ನಲ್ಲಿ ಐರ್ಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ.
ಬಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದ ಅನುಸಾರ ಭಾರತ 5 ರನ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 155 ರನ್ ಗಳಿಸಿತ್ತು. ಈ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದು ಬ್ಯಾಟಿಂಗ್ ಕ್ವೀನ್ ಸ್ಮೃತಿ ಮಂಧನಾ ಭರ್ಜರಿ ಬ್ಯಾಟಿಂಗ್. ಅವರು ಜೀವನಶ್ರೇಷ್ಠ 87 ರನ್ ಗಳಿಸಿದರು. ಭರ್ಜರಿ ಬೌಂಡರಿ ಸಿಕ್ಸರ್ ಗಳ ಮೂಲಕ ಸ್ಮೃತಿ ತಾವು ಶ್ರೇಷ್ಠ ಬ್ಯಾಟಿಗ ಎನ್ನುವುದನ್ನು ಮತ್ತೆ ನಿರೂಪಿಸಿದರು. ಆದರೆ ಚೊಚ್ಚಲ ಶತಕ ಸಿಡಿಸುವ ಅವಕಾಶ ಸ್ವಲ್ಪದರಲ್ಲೇ ಕೈ ತಪ್ಪಿತು.
ಈ ಮೊತ್ತ ಬೆನ್ನತ್ತಿದ ಐರ್ಲೆಂಡ್ ಮೊದಲ ಓವರ್ ನಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದರೆ ಬಳಿಕ ಗ್ಯಾಬಿ ಲೆವಿಸ್ 32 ಲೌರಾ ಡೆಲ್ನೆ 17 ರನ್ ಗಳಿಸಿ ಮಿಂಚಿದರು. ತಂಡದ ಮೊತ್ತ 8.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಈ ವೇಳೆ ಮಳೆ ಬಂದು ಪಂದ್ಯ ನಡೆಯಲಿಲ್ಲ. ಆದರೆ ಡಕ್ ವರ್ತ್ ನಿಯಮದ ಪ್ರಕಾರ ಐರ್ಲೆಂಡ್ 8.2 ಓವರ್ ಗಳಲ್ಲಿ 59 ರನ್ ಗಳಿಸಬೇಕಿತ್ತು. ಆದರೆ 54 ರನ್ ಗಳಿಸಿದ್ದರಿಂದ ಪಂದ್ಯ 5 ರನ್ ಗಳಿಂದ ಭಾರತದ ಪಾಲಾಯಿತು.
ಇದೀಗ ಸೆಮಿಫೈನಲ್ ನಲ್ಲಿ ಭಾರತಕ್ಕೆ ಕಠಿಣ ಎದುರಾಳಿ ಆಸ್ಟ್ರೇಲಿಯಾವನ್ನು ಎದುರಿಸಬೇಕಿದೆ. ಆಸೀಸ್ ವಿರುದ್ಧ ಗೆಲ್ಲುವುದು ಸುಲಭದ ಮಾತಲ್ಲ. ಹೀಗಾಗಿ ಮತ್ತೆ ಭಾರತದ ವಿಶ್ವಕಪ್ ಯಾತ್ರೆ ಸೆಮಿಫೈನಲ್ ಗೆ ಕೊನೆಯಾಗುವುದೇನೋ ಎಂಬ ಆತಂಕ ಶುರುವಾಗಿದೆ. ಈ ಪಂದ್ಯ ಗುರುವಾರ ನಡೆಯಲಿದೆ.