ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಇತ್ತೀಚೆಗೆ ಯಾಕೋ ಫಾರ್ಮ್ ಕೊರತೆ ಅನುಭವಿಸುತ್ತಿದ್ದಾರೆ.
ಭಾರತ ಮಹಿಳಾ ತಂಡದ ಬ್ಯಾಟಿಂಗ್ ಆಧಾರ ಸ್ತಂಬವಾಗಿರುವ ಸ್ಮೃತಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಛಲಗಾತಿ. ಆಕೆಯನ್ನು ಬ್ಯಾಟಿಂಗ್ ಕ್ವೀನ್ ಎಂದೇ ಅಭಿಮಾನಿಗಳು ಕರೆಯುತ್ತಾರೆ.
ಆದರೆ ಡಬ್ಲ್ಯುಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡ ಬಳಿಕ ಸ್ಮೃತಿ ಬ್ಯಾಟ್ ಇದುವರೆಗೆ ಸದ್ದು ಮಾಡುತ್ತಿಲ್ಲ. ಮಹಿಳಾ ಐಪಿಎಲ್ ನಲ್ಲಿ ಸ್ಮೃತಿ ದಯನೀಯ ವೈಫಲ್ಯ ಅನುಭವಿಸಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲೂ ಸ್ಮೃತಿ ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಲಿಲ್ಲ. ಮೊದಲ ಪಂದ್ಯದಲ್ಲಿ 38 ರನ್ ಗಳಿಸಿದ್ದು ಬಿಟ್ಟರೆ ಮತ್ತುಳಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 13 ಮತ್ತು 1 ರನ್ ಗಳಿಸಿದ್ದಾರೆ. ಇದೀಗ ನಿನ್ನೆ ನಡೆದ ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲೂ ಸ್ಮೃತಿ ಕೊಡುಗೆ 11 ರನ್. ಸ್ಮೃತಿ ಫಾರ್ಮ್ ಕೊರತೆ ಅನುಭವಿಸುತ್ತಿರುವುದು ತಂಡದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಯಾಕೋ ಆರ್ ಸಿಬಿ ತಂಡಕ್ಕೆ ಬಂದಾಗಿನಿಂದ ಸ್ಮೃತಿ ಎಂದಿನಿಂತೆ ಮಿಂಚುತ್ತಿಲ್ಲ ಎನ್ನುವುದು ಅಭಿಮಾನಿಗಳಿಗೂ ನಿರಾಸೆ ತಂದಿದೆ.