Publish Date: Fri, 16 Jun 2023 (10:16 IST)
Updated Date: Fri, 16 Jun 2023 (10:19 IST)
ಮುಂಬೈ: ಐಪಿಎಲ್ 2023 ರ ಲಕ್ನೋ-ಆರ್ ಸಿಬಿ ತಂಡದ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ನಡೆದಿದ್ದ ಮಾತಿನ ಚಕಮಕಿ ಎಲ್ಲರಿಗೂ ಗೊತ್ತಿರುತ್ತದೆ.
ಈ ಘಟನೆಯ ಬಳಿಕ ಲಕ್ನೋ ಆಟಗಾರ ನವೀನ್ ಉಲ್ ಹಕ್ ಎಲ್ಲೇ ಹೋದರೂ ಅಭಿಮಾನಿಗಳು ಅವರ ಹೆಸರೆತ್ತಿ ಕಿಚಾಯಿಸುತ್ತಿದ್ದರು. ನವೀನ್ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಟ್ರೋಲ್ ಗೊಳಗಾಗಿದ್ದರು.
ಘಟನೆ ನಡೆದು ಒಂದು ತಿಂಗಳ ಬಳಿಕ ಈಗ ನವೀನ್ ಮತ್ತೆ ಆ ಘಟನೆ ಬಗ್ಗೆ ನೆನಪಿಸಿಕೊಂಡಿದ್ದಾರೆ. ಆವತ್ತು ಜಗಳ ಶುರು ಮಾಅಡಿದ್ದು ವಿರಾಟ್ ಕೊಹ್ಲಿ ಎಂದಿದ್ದಾರೆ. ಆವತ್ತು ಕೊಹ್ಲಿ ಅಂತಹ ಮಾತುಗಳನ್ನು ಆಡಬಾರದಿತ್ತು. ಪಂದ್ಯ ಮುಗಿದ ಬಳಿಕ ಶೇಕ್ ಹ್ಯಾಂಡ್ ಮಾಡುತ್ತಿದ್ದಾಗ ಕೊಹ್ಲಿಯೇ ಜಗಳ ಶುರು ಮಾಡಿದ್ದರು. ಇದು ವಿಡಿಯೋದಲ್ಲಿ ಎಲ್ಲರಿಗೂ ಕಾಣಬಹುದು. ಸಾಮಾನ್ಯವಾಗಿ ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಸ್ಲೆಡ್ಜಿಂಗ್ ಮಾಡಲು ಹೋಗುವುದಿಲ್ಲ. ನಾನು ಬೌಲರ್ ಆಗಿರುವುದರಿಂದ ಬೌಲಿಂಗ್ ಮಾಡುವಾಗ ಮಾತ್ರ ಬ್ಯಾಟಿಗರನ್ನು ಕೆಣಕುತ್ತೇನೆ. ಆದರೆ ಆವತ್ತು ನಾನೇ ಬ್ಯಾಟಿಂಗ್ ಮಾಡುತ್ತಿದ್ದೆ.ಹೀಗಾಗಿ ನಾನು ಯಾರನ್ನೂ ಸ್ಲೆಡ್ಜ್ ಮಾಡಲು ಹೋಗಿರಲಿಲ್ಲ. ಪಂದ್ಯದ ಬಳಿಕ ಶೇಕ್ ಹ್ಯಾಂಡ್ ಮಾಡುವಾಗ ಆನ್ ಫೀಲ್ಡ್ ಘಟನೆ ನೆನೆಸಿ ಕೊಹ್ಲಿ ನನ್ನ ಕೈಯನ್ನು ಬಲವಂತವಾಗಿ ಹಿಡಿದರು. ನಾನೂ ಕೂಡಾ ಮನುಷ್ಯನೇ. ಹೀಗಾಗಿ ಜಗಳ ಶುರುವಾಯಿತು. ನನ್ನ ತಂಡದವರಿಗೆ ಗೊತ್ತು ನಾನು ಘಟನೆಯನ್ನು ಹೇಗೆ ಹ್ಯಾಂಡಲ್ ಮಾಡಿದೆ ಎಂದು. ಇದೇ ವಿಚಾರವಾಗಿ ನನ್ನನ್ನು ಟೀಕಿಸುವವರಿಗೆ ನಾನು ತಲೆಯೇ ಕೆಡಿಸಿಕೊಳ್ಳಲ್ಲ. ನನಗೆ ಗೊತ್ತು ಅವರ ಬಾಯಿ ಮುಚ್ಚಿಸುವುದು ಹೇಗೆಂದು. ನಾನು ಕೇವಲ ನನ್ನ ಆಟದ ಕಡೆಗೆ ಗಮನ ಹರಿಸಿದ್ದೆ ಎಂದಿದ್ದಾರೆ.