ಲೀಡ್ಸ್: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಚುಕ್ಕಾಣಿ ಹಿಡಿದ ಮೊದಲ ಪಂದ್ಯದಲ್ಲಿ ಸ್ಮರಣಿಯ ಶತಕವನ್ನು ದಾಖಲಿಸುವ ಮೂಲಕ ಶುಭಮನ್ ಗಿಲ್ ಅವರು ದಿಗ್ಗಜ ಆಟಗಾರರನ್ನು ಒಳಗೊಂಡ ಎಲೀಟ್ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಕ್ಯಾಪ್ಟನ್ ಶುಭಮನ್ ಗಿಲ್ ಶತಕ ದಾಖಲಿಸಿ ಅಬ್ಬರಿಸಿದ್ದಾರೆ.
ಜೈಸ್ವಾಲ್ ಅವರು ಇಂಗ್ಲೆಂಡ್ ನೆಲದಲ್ಲಿ ತಾನು ಆಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಅಂತೆಯೇ ಶುಭಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.
ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ, ಭಾರತದ ಬ್ಯಾಟಿಂಗ್‌ನ ಭವಿಷ್ಯವು ಸುರಕ್ಷಿತ ಕೈಯಲ್ಲಿದೆ ಎಂದು ಸಾಬೀತುಪಡಿಸಿದರು.
ಲೀಡ್ಸ್‌ನಲ್ಲಿ ಶುಕ್ರವಾರ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಅಮೋಘ ಇನ್ನಿಂಗ್ಸ್ ಕಟ್ಟಿದರು. 159 ಬಾಲ್‌ಗೆ 101 ರನ್ ಗಳಿಸಿದ್ದಾರೆ. ಇನ್ನು ಶುಭಮನ್ ಗಿಲ್ ಔಟಾಗದೇ 127 ರನ್ ಮಾಡಿದ್ದಾರೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗೆ 359 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.
ಶುಭಮನ್ ಗಿಲ್, ನಾಯಕರಾದ ಬಳಿಕ ತಾವು ಆಡಿದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ದಿಗ್ಗಜ ಆಟಗಾರರ ಸಾಲಿಗೆ ಸೇರಿದ್ದಾರೆ. ಇದಕ್ಕೂ ಮೊದಲು ಭಾರತದ ಪರವಾಗಿ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಮಾತ್ರ ಸಿಡಿಸಿ ಎಲೀಟ್ ಪಟ್ಟಿಗೆ ಸೇರಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 3000 ರನ್ಸ್ ಗಡಿದಾಟಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ಕೀರ್ತಿಗೂ ಅವರು ಪಾತ್ರರಾದರು ಇವರಿಗಿಂತ ವೇಗವಾಗಿ ಆಸ್ಟ್ರೇಲಿಯಾದ ಲೆಜಂಡ್ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್ ಮಾತ್ರ ಪೂರ್ಣಗೊಳಿಸಿದ್ದಾರೆ. ಅವರು ತಮ್ಮ 63ನೇ ಇನ್ನಿಂಗ್ಸ್‌ನಲ್ಲಿ 3 ಸಾವಿರ ರನ್ ಹೊಡೆದ ಸಾಧನೆ ಮಾಡಿದ್ದಾರೆ.