ಕೋಲ್ಕತಾ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿರುವಂತೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಗಾಯಾಳಾಗಿ ಆಸ್ಪತ್ರೆ ಸೇರಿದ್ದಾರೆ.
ಕುತ್ತಿಗೆ ನೋವಿನಿಂದ ಬಳಲುತ್ತಿರುವ ಶುಭಮನ್ ಗಿಲ್ ಅವರು ಪಂದ್ಯದ ಮೊದಲ ಇನಿಂಗ್ಸ್ ಬ್ಯಾಟಿಂಗ್ ವೇಳೆ ಗಾಯಾಳಾಗಿ ನಿವೃತ್ತರಾಗಿದ್ದರು. ಹೀಗಾಗಿ, ಎರಡನೇ ಇನಿಂಗ್ಸ್‌ನಲ್ಲೂ ಕಣಕ್ಕೆ ಇಳಿಯುವುದು ಅನುಮಾನವಾಗಿದೆ.
ನವೆಂಬರ್ 22 ರಿಂದ 26 ರವರೆಗೆ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಸಿಸಿಐ ಭಾನುವಾರ ದೃಢಪಡಿಸಿದೆ.
ಕೋಲ್ಕತಾ ಟೆಸ್ಟ್‌ನ ಎರಡನೇ ದಿನವಾದ ಶನಿವಾರ ಬ್ಯಾಟಿಂಗ್ ನಡೆಸುವ ವೇಳೆ ಗಿಲ್ ಅವರ ಕುತ್ತಿಗೆ ಉಳುಕು ಸಂಭವಿಸಿತ್ತು. ನೋವಿನಿಂದ ನರಳಿದ ಅವರು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದಿದ್ದರು. ಬಳಿಕ ಫೀಲ್ಡಿಂಗ್‌ಗೂ ಆಗಮಿಸಿರಲಿಲ್ಲ.
ಗಿಲ್ ಅವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಿಸಿಸಿಐ ಮೂಲಗಳ ಪ್ರಕಾರ, ಗಿಲ್ ಫಿಟ್ ಆಗಲು ಕೆಲವು ದಿನಗಳು ಬೇಕಾಗುತ್ತದೆ. ಹೀಗಾಗಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಅವರು ಭಾಗವಹಿಸುವುದು ಅನುಮಾನವಾಗಿದೆ.