ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ದಯೆಯಿಂದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಒಂದು ವಿಕೆಟ್ ಸಿಕ್ಕಿದೆ. ಇದಕ್ಕಾಗಿ ಸರ್ಫರಾಜ್, ನಾಯಕ ರೊಹಿತ್ ಬಳಿ ಬೇಡಿಕೊಂಡ ವಿಡಿಯೋ ಈಗ ವೈರಲ್ ಆಗಿದೆ.
24 ನೇ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ ಬೌಲಿಗ್ ಮಾಡುತ್ತಿದ್ದರು. ಈ ವೇಳೆ ವಿಲ್ ಯಂಗ್ ಗ್ಲೌಸ್ ಸವರಿಕೊಂಡ ಹೋದ ಚೆಂಡನ್ನು ವಿಕೆಟ್ ಕೀಪರ್ ರಿಷಭ್ ಪಂತ್ ಕ್ಯಾಚ್ ಮಾಡಿದ್ದರು. ತಕ್ಷಣವೇ ರವಿಚಂದ್ರನ್ ಅಶ್ವಿನ್ ಮತ್ತು ಅಲ್ಲೇ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಜೋರಾಗಿ ಔಟ್ ಗೆ ಮನವಿ ಮಾಡಿದರು.
ಅತ್ತ ಅಂಪಾಯರ್ ಔಟ್ ಕೊಡಲಿಲ್ಲ. ಇತ್ತ ರೋಹಿತ್ ಶರ್ಮಾ, ಕೀಪರ್ ರಿಷಭ್ ಪಂತ್ ಸೇರಿದಂತೆ ಯಾವುದೇ ಆಟಗಾರರೂ ಡಿಆರ್ ಎಸ್ ಗೆ ಮನವಿ ಸಲ್ಲಿಸಲು ಮನಸ್ಸು ಮಾಡಲಿಲ್ಲ. ಈ ವೇಳೆ ಸರ್ಫರಾಜ್ ಖಾನ್ ನೇರವಾಗಿ ರೋಹಿತ್ ಬಳಿ ಹೋಗಿ ನನ್ನ ಮೇಲೆ ಭರವಸೆಯಿಡಿ ಭಾಯಿ, ದಯವಿಟ್ಟು ಇದನ್ನು ಡಿಆರ್ ಎಸ್ ಗೆ ಕೊಡಿ ಎಂದು ಅಕ್ಷರಶಃ ಬೇಡಿಕೊಂಡರು.
ಒತ್ತಾಯಕ್ಕೆ ಮಣಿದ ರೋಹಿತ್ ಮನಸ್ಸಿಲ್ಲದ ಮನಸ್ಸಿನಿಂದ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಅದೃಷ್ಟವಶಾತ್ ಚೆಂಡು ಯಂಗ್ ಗ್ಲೌಸ್ ಸವರಿಕೊಂಡು ಕೀಪರ್ ಕೈ ಸೇರಿದ್ದು ಸ್ಪಷ್ಟವಾಯಿತು. ಇದರಿಂದಾಗಿ ಭಾರತಕ್ಕೆ ಎರಡನೇ ವಿಕೆಟ್ ಸಿಕ್ಕಿತು. ತನ್ನಿಂದಾಗಿ ವಿಕೆಟ್ ಸಿಕ್ಕ ಖುಷಿ ಸರ್ಫರಾಜ್ ಮುಖದಲ್ಲೂ ಎದ್ದು ಕಾಣುತ್ತಿತ್ತು.
ಇನ್ನು, ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲೆಂಡ್ ಭೋಜನ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ. ಡೆವನ್ ಕಾನ್ವೇ 47 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.