ಮುಂಬೈ: ಭಾರತದ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ. ವಿಶೇಷವೆಂದರೆ ಅವರು ಈ ಬಾರಿ ಸ್ವದೇಶದ ಕ್ರಿಕೆಟ್ ದಿಗ್ಗಜರ ದಾಖಲೆಯನ್ನು ಮುರಿಯಲಿದ್ಧಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ 30 ರಿಂದ ಶುರುವಾಗಲಿದೆ. ಮೊದಲ ಮ್ಯಾಚ್ ರಾಂಚಿಯಲ್ಲಿ ನಡೆದರೆ, ದ್ಬಿತೀಯ ಪಂದ್ಯವು ಡಿಸೆಂಬರ್ 3 ರಂದು ರಾಯ್ಪುರದಲ್ಲಿ ನಡೆಯಲಿದೆ. ಇನ್ನು ಮೂರನೇ ಮ್ಯಾಚ್ ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ಜರುಗಲಿದೆ.
ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಏಕದಿನ ಸರಣಿ ಶುರುವಾಗಲಿದೆ. ಇದೇ 30 ರಂದು ಆರಂಭವಾಗಲಿರುವ ಈ ಸರಣಿಯ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
ರಾಂಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ಜೋಡಿ ಎಂಬ ವಿಶ್ವ ದಾಖಲೆ ರೋಹಿತ್, ವಿರಾಟ್ ಹೆಸರಿಗೆ ಸೇರ್ಪಡೆಯಾಗಲಿದೆ.
ಸದ್ಯ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ಸಚಿನ್-ರಾಹುಲ್ ಜೋಡಿಯು ಜೊತೆಯಾಗಿ 391 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ಮೂಲಕ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ 391 ಅಂತಾರಾಷ್ಟ್ರೀಯ ಪಂದ್ಯಗಳ ದಾಖಲೆಯನ್ನು ಸರಿಗಟ್ಟಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇದೀಗ ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿದ್ದಾರೆ.