ಬೆಂಗಳೂರು: ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಪಾಡ್ ಕಾಸ್ಟ್ ಒಂದರಲ್ಲಿ ಭಾರತದಿಂದ ದುಬೈಗೆ ಶಿಫ್ಟ್ ಆಗಿರುವ ಬಗ್ಗೆ ನೀಡಿರುವ ಹೇಳಿಕೆ ನೆಟ್ಟಿಗರಿಂದ ಭಾರೀ ಟೀಕೆಗೆ ಗುರಿಯಾಗಿದೆ.
ರಾಬಿನ್ ಉತ್ತಪ್ಪ ಕರ್ನಾಟಕದ ಪರವಾಗಿ ರಣಜಿ ಆಡಿದವರು. ಟೀಂ ಇಂಡಿಯಾ 2007 ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದರು. ಈಗಲೂ ಹಲವು ಲೀಗ್ ಪಂದ್ಯಗಳಲ್ಲಿ ಆಡುತ್ತಲೇ ಇದ್ದಾರೆ. ಆದರೆ ಪ್ರಸ್ತುತ ಅವರು ಭಾರತ ಬಿಟ್ಟು ದುಬೈಗೆ ಫ್ಯಾಮಿಲಿ ಸಮೇತ ಶಿಫ್ಟ್ ಆಗಿದ್ದಾರಂತೆ.
ಇದರ ಬಗ್ಗೆ ಅವರು ಪಾಡ್ ಕಾಸ್ಟ್ ಒಂದರಲ್ಲಿ ಮಾತನಾಡಿದ್ದಾರೆ. ಭಾರತ ಬಿಟ್ಟು ದುಬೈನಲ್ಲಿ ಶಿಫ್ಟ್ ಆಗಿದ್ದು ಯಾಕೆ ಎಂದು ಕಾರಣವನ್ನೂ ನೀಡಿದ್ದಾರೆ. ಅವರು ನೀಡಿದ ಕಾರಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ನಿಮಗೆ ದುಡ್ಡು ಮಾಡಲು ಮಾತ್ರ ಭಾರತ ಬೇಕು. ನೆಲೆಸಲು ವಿದೇಶ ಆಗಬೇಕು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಭಾರತ ಬಿಟ್ಟು ದುಬೈನಲ್ಲಿ ನೆಲೆಸಲು ಕಾರಣ ಕೇಳಿದಾಗ ಉತ್ತಪ್ಪ, ಇಲ್ಲಿನ ಟ್ರಾಫಿಕ್ ಕಾರಣದಿಂದ ದುಬೈಗೆ ಶಿಫ್ಟ್ ಆಗಬೇಕಾಯಿತು ಎಂದಿದ್ದಾರೆ. ನನ್ನ ಮಕ್ಕಳು ಇಲ್ಲಿನ ಟ್ರಾಫಿಕ್ ನಲ್ಲೇ ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡುವುದು ಬೇಡ ಎನಿಸಿತು. ನನ್ನ ಮಗಳು ಈ ಹಿಂದೆ ಅನಾರೋಗ್ಯಕ್ಕೀಡಾದಾಗ ಅವಳಿಗೆ ವೈದ್ಯರ ಬಳಿ ಹೋಗಲು 3.5 ಕಿ.ಮೀ. ದೂರ ಡ್ರೈವ್ ಮಾಡಲು ಟ್ರಾಫಿಕ್ ನಲ್ಲೇ ನಾಲ್ಕು ಗಂಟೆ ಕಳೆದಿದ್ದೆ. ಹೊರಗಡೆ ಹೋಗುವಾಗ ಟ್ರಾಫಿಕ್ ನಿಂದಾಗಿಯೇ ನನ್ನ ಮಕ್ಕಳಿಗೆ ಹಸಿವಾಗುವುದು ಬೇಡ ಎಂದು ಹಾಲು, ಆಹಾರ ತೆಗೆದುಕೊಂಡು ಹೋಗುತ್ತಿದ್ದೆ. ಇಂತಹ ವಾತಾವರಣದಲ್ಲಿ ಮಕ್ಕಳು ಬೆಳೆಯುವುದು ಬೇಡ ಎಂದು ದುಬೈಗೆ ಶಿಫ್ಟ್ ಆಗಲು ತೀರ್ಮಾನಿಸಿದೆವು ಎಂದಿದ್ದಾರೆ. ಅವರ ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.