ಚೆನ್ನೈ: ಐಪಿಎಲ್ 2025 ರಲ್ಲಿ ಇಂದು ಬಹುನಿರೀಕ್ಷಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ನಡೆಯಲಿದೆ. ಇಂದಿನ ಜಿದ್ದಾಜಿದ್ದಿನ ಪಂದ್ಯ ನೋಡಲು ನೀವು ರೆಡಿನಾ?
ಕಳೆದ ಬಾರಿ ಐಪಿಎಲ್ ಸೀಸನ್ ನಲ್ಲಿ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್ ಸಿಬಿ ಸೋಲಿಸಿತ್ತು. ಆ ಪಂದ್ಯವನ್ನು ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಪಂದ್ಯವನ್ನು ಆರ್ ಸಿಬಿ ಗೆದ್ದಾಗ ಆ ಪಂದ್ಯಕ್ಕೆ ಫೈನಲ್ ಗಿಂತ ಹೆಚ್ಚು ಕಳೆ ಬಂದಿತ್ತು. ಈ ಸೋಲಿನ ಬಳಿಕ ಸಿಎಸ್ ಕೆ ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪೈಪೋಟಿ ನಿರೀಕ್ಷಿಸಬಹುದು.
ಈ ಸೀಸನ್ ನಲ್ಲಿ ಮೊದಲ ಪಂದ್ಯವನ್ನು ಆರ್ ಸಿಬಿ ಅಧಿಕಾರಯುತವಾಗಿ ಗೆದ್ದುಕೊಂಡಿತ್ತು. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಭರ್ಜರಿ ಪ್ರದರ್ಶನ ನೀಡಿತ್ತು. ಇಂದು ಚೆನ್ನೈ ತಂಡವನ್ನು ಅದರ ತವರಿನಲ್ಲಿಯೇ ಸೋಲಿಸಲು ಆರ್ ಸಿಬಿ ಮತ್ತದೇ ಫಾರ್ಮ್ ಪ್ರದರ್ಶಿಸಬೇಕಿದೆ. ಇಂದಿನ ಪಂದ್ಯಕ್ಕೆ ಆರ್ ಸಿಬಿ ತಂಡದಲ್ಲಿ ಬದಲಾವಣೆ ಸಾಧ್ಯತೆಯಿಲ್ಲ.
ಇತ್ತ, ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಆದರೆ ಆ ಪಂದ್ಯದಲ್ಲಿ ಬ್ಯಾಟಿಂಗ್ ಹೇಳಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ. ಆದರೆ ನಾಯಕ ಋತುರಾಜ್ ಗಾಯಕ್ ವಾಡ್, ರಚಿನ್ ರವೀಂದ್ರ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ಈ ಇಬ್ಬರನ್ನು ಕಟ್ಟಿ ಹಾಕಿದರೆ ಆರ್ ಸಿಬಿ ಅರ್ಧ ಪಂದ್ಯ ಗೆದ್ದಂತೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.